ದತ್ತಾಂಶ ಸೋರಿಕೆ ವಿವಾದ: ಮಾಹಿತಿ ಕೇಳಿ ಫೇಸ್ ಬುಕ್ ಗೆ ಐಟಿ ಸಚಿವಾಲಯ ಪತ್ರ
ನವದೆಹಲಿ: ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯ ಫೇಸ್ ಬುಕ್ ಕಂಪೆನಿಗೆ ಪತ್ರ ಬರೆದು ಮಾಹಿತಿ ಕೇಳಿದೆ.
ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ ಬುಕ್ ಬಳಕೆದಾರರ ದತ್ತಾಂಶಗಳನ್ನು ಬಳಸಿಕೊಂಡು ಹಲವು ದೇಶಗಳಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬ ಕಳೆದ ಕೆಲ ದಿನಗಳಿಂದ ಬರುತ್ತಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಸಚಿವಾಲಯ ಈ ವರದಿ ಕೇಳಿದೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯ ಫೇಸ್ ಬುಕ್ ಸಂಸ್ಥೆಗೆ ಸರಣಿಯಲ್ಲಿ ಪ್ರಶ್ನೆಗಳನ್ನು ಕೇಳಿದೆ. ಭಾರತೀಯ ಮತದಾರರ ಖಾಸಗಿ ದತ್ತಾಂಶಗಳು ಮತ್ತು ಬಳಕೆದಾರರ ಮಾಹಿತಿಗಳನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆಯೇ? ಫೇಸ್ ಬುಕ್ ಅಥವಾ ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಬಳಕೆದಾರರ ಫೇಸ್ ಬುಕ್ ದಾಖಲೆಗಳನ್ನು ಬಳಸಿಕೊಂಡು ಈ ಹಿಂದೆ ಭಾರತೀಯ ಮತದಾರರ ಹಾದಿತಪ್ಪಿಸಲು ನೋಡಿದ್ದಿದೆಯೇ?
ಈ ಬಗ್ಗೆ ವಿವರಗಳನ್ನು ಏಪ್ರಿಲ್ 7ರೊಳಗೆ ಸಲ್ಲಿಸಬೇಕು ಎಂದು ಸಚಿವಾಲಯ ಹೇಳಿದೆ.
ಕೇಂಬ್ರಿಡ್ಜ್ ಅನಾಲಿಟಿಕಾಕ್ಕೆ ನೊಟೀಸ್ ಕಳುಹಿಸಿ ಎರಡು ದಿನ ಕಳೆದ ನಂತರ ಫೇಸ್ ಬುಕ್ ಗೆ ಈ ಪತ್ರವನ್ನು ಸಚಿವಾಲಯ ತಿಳಿಸಿದೆ.
ಕಳೆದ ವಾರ ಕೇಂದ್ರ ಐಟಿ ಮತ್ತು ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಎಚ್ಚರಿಕೆ ನೀಡಿ, ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ನಾನಿದನ್ನ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ನಾವು ಪತ್ರಿಕಾ ಸ್ವಾತಂತ್ರ್ಯ, ವಾಕ್ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ಮತದಾರರ ಮೇಲೆ ಅಡ್ಡ ಪರಿಣಾಮ ಬೀರಲು ಸಾಮಾಜಿಕ ಮಾಧ್ಯಮಗಳು ಯತ್ನಿಸಿದರೆ ಅದನ್ನು ಸಹಿಸುವುದು ಕೂಡ ಇಲ್ಲ ಮತ್ತು ಇಷ್ಟಪಡುವುದು ಕೂಡ ಇಲ್ಲ ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟ ಸಂದೇಶ ನೀಡಿದ್ದರು.
ಯಾವುದೇ ಮಾಹಿತಿ ಉಲ್ಲಂಘನೆ ಬೆಳಕಿಗೆ ಬಂದರೆ ಐಟಿ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಗರ್ ಬರ್ಗ್ ಗೆ ಸಹ ಎಚ್ಚರಿಕೆ ನೀಡಿದ್ದರು.


