ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳ ನಾಯಕರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಮಧ್ಯಪ್ರವೇಶಿಸುವಂತೆ...
ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳ ನಾಯಕರು
ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳ ನಾಯಕರು
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಬುಧವಾರ ಭೇಟಿ ಮಾತುಕತೆ ನಡೆಸಿದ್ದಾರೆ. 
ಸುಪ್ರೀಂಕೋರ್ಟ್ ತೀರ್ಪು ಕುರಿತು ಕಳೆದ ವಾರವಷ್ಟೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಇನ್ನಿತರೆ ಪ್ರಮುಖ ನಾಯಕರು ಚರ್ಚೆ ನಡೆಸಿದ್ದರು. ಚರ್ಚೆ ಬಳಿಕ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದ ಗೆಹ್ಲೋಟ್ ಅವರು, ಪತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆಗಾಗಿ ನಿಬಂಧನೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದರು. 
ಕಾಯ್ದೆಯನ್ನು ಉದ್ದೇಶಪೂರ್ವಕವಾಗಿಯೇ ದುರ್ಬಲಗೊಳಿಸಲಾಗುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ವಿರೋಧಿಸುತ್ತಿಲ್ಲ. ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗುವುದಕ್ಕೂ ಕಡ್ಡಾಯವಾಗಿ ಅನುಮತಿ ಪಡೆಯುವುದು ಹಾಗೂ ನಿರೀಕ್ಷಿತ ಜಾಮೀನು ಪಡೆಯುವುದಕ್ಕೂ ಅನುಮತಿ ನೀಡಲಾಗುತ್ತದೆ ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದ್ದಾರೆ. 
ಎಸ್'ಸಿ ಮತ್ತು ಎಸ್'ಸಿ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿಲೇ ಇದೆ. ಅವರ ಬಳಿಯಿದ್ದ ಒಂದು ಅಸ್ತ್ರವನ್ನು ಇದೀಗ ದುರ್ಬಲಗೊಳಿಸಲಾಗುತ್ತಿದೆ ಎಂದು ರಾಷ್ಟ್ರಪತಿಗಳಿಗೆ ತಿಳಿಸಿದ್ದೇವೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೋವಿಂದ್ ಅವರು ಭರವಸೆ ನೀಡಿದ್ದಾರೆಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. 
ರಾಹುಲ್ ಗಾಂಧಿಯವರೊಂದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕುಮಾರಿ ಸೆಲ್ಜಾ, ಬಿಎಸ್'ಸಿ ರಾಜ್ಯಸಭಾ ಸದಸ್ಯ ಸತೀಶ್ ಚಂದ್ರ ಮಿಶ್ರಾ, ಡಿಎಂಕೆ ಸಂಸದ ಕನಿಮೋಳಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಸಾಥ್ ನೀಡಿದ್ದರು. 
ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿರುವ ವಿರೋಧ ಪಕ್ಷಗಳ ನಾಯಕರು, ಮನವಿ ಪತ್ರದಲ್ಲಿ ಎಸ್'ಸಿಆರ್'ಬಿ ವರದಿಯನ್ನು ಉಲ್ಲೇಖಿಸಿದ್ದಾರೆ. ಪ್ರತೀ 15 ನಿಮಯಿಗಳಲ್ಲಿ ಒಂದಾದರೂ ಎಸ್'ಸಿ ಮತ್ತು ಎಸ್'ಸಿ ಜನರ ಮೇಲೆ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಪ್ರತೀ ನಿತ್ಯ 6 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. 2007 ಮತ್ತು 2017ರಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದ್ವಿಗುಣಗೊಂಡಿದೆ. ಶೇ.66 ರಷ್ಟು ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. 
ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಅಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಭಯದಿಂದಾಗಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com