
ನವದೆಹಲಿ: ಚೀನಾದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಇಂಟರ್ನೆಟ್ ಬಳಕೆ ಮಾಡುವವರು ಭಾರತೀಯರಾಗಿದ್ದು 462.12 ದಶಲಕ್ಷ ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ. ಆದರೆ ದತ್ತಾಂಶಗಳ ರಕ್ಷಣೆ ಮತ್ತು ಖಾಸಗಿತನಕ್ಕೆ ಭಾರತದಲ್ಲಿ ಕಾನೂನಿನ ಚೌಕಟ್ಟಿನ ಕೊರತೆಯಿದ್ದು ಪ್ರಸ್ತುತ ಇರುವ ಕಾನೂನು ಸೂಕ್ತವಾಗಿಲ್ಲ ಎಂದು ಸೈಬರ್ ಭದ್ರತೆ ತಜ್ಞರು ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಮೂಲಕ ಬಳಕೆದಾರರ ದತ್ತಾಂಶಗಳನ್ನು ಮತ್ತು ಖಾಸಗಿ ವಿಷಯಗಳನ್ನು ಕದಿಯಲಾಗುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದು, ಇತ್ತೀಚಿನ ಬೆಳವಣಿಗೆ ಬಳಕೆದಾರರು ತಮ್ಮ ದೈನಂದಿನ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮರು ಪರೀಕ್ಷಿಸುವ ಪರಿಸ್ಥಿತಿ ಬಂದಿದೆ.
ಇಂಗ್ಲೆಂಡ್ ಮೂಲದ ಅನಾಲಿಟಿಕಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತು ಬ್ರೆಕ್ಸಿಟ್ ಪರ ಅಭಿಯಾನ ಹಾಗೂ ಇತರ ದೇಶಗಳ ಚುನಾವಣೆಯಲ್ಲಿ 50 ದಶಲಕ್ಷಕ್ಕೂ ಹೆಚ್ಚು ಫೇಸ್ ಬುಕ್ ಬಳಕೆದಾರರ ಮೇಲೆ ಪ್ರಭಾವ ಬೀರಿತ್ತು ಎಂದು ಕಳೆದ ತಿಂಗಳು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಈ ಸುದ್ದಿ ಇತ್ತೀಚೆಗೆ ಭಾರತದಲ್ಲಿಯೂ ಭಾರೀ ಸದ್ದು ಮಾಡಿತ್ತು. ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಮಾಜಿ ಉದ್ಯೋಗಿ ಕ್ರಿಸ್ಟೊಫರ್ ವೈಲಿ, ಸಂಸ್ಥೆ ಭಾರತದಲ್ಲಿ ಅವ್ಯಾಹತವಾಗಿ ಕಾರ್ಯಚರಣೆ ನಡೆಸಿ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಿತ್ತು. ಕಾಂಗ್ರೆಸ್ ಮತ್ತು ಸಂಯುಕ್ತ ಜನತಾದಳ ಪರವಾಗಿ ಕೆಲಸ ಮಾಡಿತ್ತು ಎಂದು ಆರೋಪಿಸಿದ್ದರು.
ಜಾಗತಿಕವಾಗಿ ಇಂಟರ್ನೆಟ್ ಬಳಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಪ್ರಕಾರ ಮತ್ತು ಅದರ ತಿದ್ದುಪಡಿ ಕಾಯ್ದೆ 2008 ಮತ್ತು 2011 ಸಾಮಾಜಿಕ ಮಾಧ್ಯಮ ಮತ್ತು ಸೈಬರ್ ಅಪರಾಧಗಳ ಪರಿಣಾಮಕಾರಿ ಜಾರಿಗೆ ಕಟ್ಟುನಿಟ್ಟಿನ ಕಾನೂನು ಹೊಂದಿಲ್ಲ ಎಂದು ಸೈಬರ್ ಭದ್ರತೆ ಅರ್ನ್ಸ್ಟ್ & ಯಂಗ್ ನ ಪಾಲುದಾರ ಜಸ್ಪ್ರೀತ್ ಸಿಂಗ್ ತಿಳಿಸಿದ್ದಾರೆ.
ದತ್ತಾಂಶ ಭದ್ರತೆ ಮತ್ತು ಖಾಸಗಿತನಗಳನ್ನು ಕಾಪಾಡುವ ಸೂಕ್ತ ಕಾನೂನನ್ನು ಭಾರತ ಹೊಂದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
Advertisement