ಲಖನೌ: ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಪೋಷಕರೇ ಹೊಣೆಯಾಗಿದ್ದು, ಮಕ್ಕಳನ್ನು ಮುಕ್ತವಾಗಿ ತಿರುಗಾಡಲು ಬಿಡಬಾರದು ಎಂದು ಉತ್ತರ ಪ್ರದೇಶ ಆಡಳಿತರೂಢ ಬಿಜೆಪಿ ಶಾಸಕರೊಬ್ಬರು ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಎರಡು–ಮೂರು ಮಕ್ಕಳ ತಾಯಿ ಮೇಲೆ ಯಾರೂ ಅತ್ಯಾಚಾರ ಎಸಗುವುದಿಲ್ಲ ಎಂದಿದ್ದ ಬಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರದ ಬಿಜೆಪ ಶಾಸಕ ಸುರೇಂದ್ರ ಸಿಂಗ್ ಅವರು ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ.
ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಯುವಕರ ತಂದೆ-ತಾಯಿಯೇ ಕಾರಣ. ಏಕೆಂದರೆ ಅವರು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದಿದ್ದಾರೆ.
15 ವರ್ಷದವರೆಗೆ ಮಕ್ಕಳ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸಬೇಕು ಮತ್ತು ಇದು ಪೋಷಕರ ಕರ್ತವ್ಯ. ಆದರೆ ಹಾಗೆ ಮಾಡದೇ ಮಕ್ಕಳನ್ನು ಮುಕ್ತವಾಗಿ ಬಿಡುತ್ತಿರುವುದೇ ಅತ್ಯಾಚಾರ ಹೆಚ್ಚಾಗಲು ಕಾರಣ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಮಾಧ್ಯಮಗಳಿಗೆ ಮಸಾಲೆ ಆಗದಿರಿ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದ ನಂತರವೂ ಸುರೇಂದ್ರ ಸಿಂಗ್ ಅವರು ಎರಡು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.