ಒತ್ತುವರಿ ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿ ಹತ್ಯೆ: ಗಂಭೀರ ವಿಚಾರ ಎಂದು 'ಸುಪ್ರೀಂ' ಕಳವಳ

ಅಕ್ರಮ ಭೂ ಒತ್ತುವರಿ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿಯನ್ನು ಹೊಟೆಲ್ ಮಾಲೀಕನೋರ್ವ ಗುಂಡು ಹಾರಿಸಿ ಕೊಂದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಗುರುವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಕ್ರಮ ಭೂ ಒತ್ತುವರಿ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿಯನ್ನು ಹೊಟೆಲ್ ಮಾಲೀಕನೋರ್ವ ಗುಂಡು ಹಾರಿಸಿ ಕೊಂದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಗುರುವಾರ  ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.
ಈ ಬಗ್ಗೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ವಿಚಾರ ತೀರಾ ಗಂಭೀರವಾದದ್ದಾಗಿದ್ದು, ನಾಳೆ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದೆ.
'ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ನಾವೂ ಕೂಡ ಆದೇಶ ನೀಡುವುದನ್ನು ನಿಲ್ಲಿಸಬೇಕಾದ ಪರಿಸ್ಥಿತಿ ತಲೆದೋರಬಹುದು. ಸಾಕಷ್ಟು ಮಂದಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. 
ಕಳೆದ ಏಪ್ರಿಲ್ 17ರಂದು ಅಕ್ರಮ ಭೂ ಒತ್ತುವರಿ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಕ್ರಮ ಕಟ್ಟಡಗಳನ್ನು ಮತ್ತು ಪ್ರವಾಸಿಗರಿಗೆ ಅಸುರಕ್ಷಿತವಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ಪಟ್ಟಣಾಭಿವೃದ್ಧಿ ಮತ್ತು ಯೋಜನಾ ವಿಭಾಗದ ಸಹಾಯಕ ಅಧಿಕಾರಿ ಶೈಲಾ ಬಾಲಾ ಅವರು ಸೋಲಾನ್ ನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. 
ಹಿಮಾಚಲ ಪ್ರದೇಶ ಸೋಲನ್ ಪ್ರಾಂತ್ಯದಲ್ಲಿ ಸಹಾಯಕ ಪಟ್ಟಣ ಮತ್ತು ಯೋಜನಾ ಅಧಿಕಾರಿ ಶೈಲಾ ಬಾಲಾ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ಒತ್ತುವರಿ ಕಾರ್ಯಾಚರಣೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದೂ ಕೂಡ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಆದರೆ ಇದರಿಂದ ಆಕ್ರೋಶಗೊಂಡ ಹೊಟೆಲ್ ಮಾಲೀಕನೋರ್ವ ತನ್ನ ಪಿಸ್ತೂಲ್ ತಂದು ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರೊಳಗಾಗಲೇ ಅವರು ಮೃತಪಟ್ಟಿದ್ದರು.
ಸರ್ಕಾರದ ಆದೇಶದ ಮೇರೆಗೆ ಅಧಿಕಾರಿ ಶೈಲಾ ಬಾಲಾ ಅವರು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಒಟ್ಟು 13 ಕಟ್ಟಡಗಳನ್ನು ನೆಲಸಮ ಮಾಡಿದ್ದರು. ಇನ್ನೂ ಕೆಲವು ಕಟ್ಟಡಗಳ ಒತ್ತುವರಿ ಕಾರ್ಯಾಚರಣೆ ಬಾಕಿ ಇದ್ದುದರಿಂದ ಇಂದೂ ಕೂಡ ಕಾರ್ಯಾಚರಣೆ ಮುಂದುವರೆದಿತ್ತು. ಅಷ್ಟರೊಳಗಾಗಲೇ ದುರಂತ ಸಂಭವಿಸಿದೆ. ವಿವಾದಿತ ಮತ್ತು ಸುರಕ್ಷಿತ ವಲ್ಲದ ಪ್ರದೇಶದಲ್ಲಿ ಹೊಟೆಲ್ ಗಳು ಅಕ್ರಮವಾಗಿ ತಲೆ ಎತ್ತಿರುವುದನ್ನು ಮನಗಂಡ ಅಧಿಕಾರಿ ಶೈಲಾ  ಬಾಲಾ ಅವರು ಕಾರ್ಯಾಚರಣೆ ಕೈಗೊಂಡಿದ್ದರು. 
ಪ್ರಸ್ತುತ ಆರೋಪಿ ಗೆಸ್ಟ್ ಹೌಸ್ ಮಾಲೀಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ ಆತನ ಸುಳಿವು ನೀಡಿವರಿಗೆ 1 ಲಕ್ಷ ನಗದು ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com