ಬಂಡಿಪೋರಾ: 2 ನಾಗರೀಕರ ಅಪಹರಿಸಿ ಹತ್ಯೆಗೈದ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಇಬ್ಬರು ನಾಗರೀಕರನ್ನು ಅಪಹರಿಸಿದ್ದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಶನಿವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಇಬ್ಬರು ನಾಗರೀಕರನ್ನು ಅಪಹರಿಸಿದ್ದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಶಹ್ಗುಂದ್ ಹಜಿನ್ ನಲ್ಲಿರುವ ಗುಲ್ಶಾನ್ ಮೊಹಲ್ಲಾದಲ್ಲಿರುವ ಮನೆಗಳಿಗೆ ನುಗ್ಗಿದ್ದ ಉಗ್ರರು ಗುಲಾಮ್ ಹಸ್ಸನ್ ದಾರ್ ಅಲಿಯಾಸ್ ಹಸ್ಸನ್ ರಸ್ಸಾ ಮತ್ತು ಬಶೀರ್ ಅಹ್ಮದ್ ದಾರ್ ಎಂಬುವವರನ್ನು ಅಪಹರಣ ಮಾಡಿದ್ದರು. 
ಅಪಹರಣಕ್ಕೊಳಗಾಗಿದ್ದ ಇಬ್ಬರೂ ನಾಗರೀಕರ ಮೃತದೇಹ ದಾರುಣ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ 3.30ರ ಸುಮಾರಿಗೆ ಪತ್ತೆಯಾಗಿದೆ. ಇಬ್ಬರ ಮೇಲೂ ಉಗ್ರರು ಮನಬಂದಂತೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆಂದು ತಿಳಿದುಬಂದಿದೆ. 
ಇಬ್ಬರ ಮೃತದೇಹಗಳು ಶಹ್ಗುಂದ್ ನ ರಹೀಮ್ ದಾರ್ ಮೊಹಲ್ಲಾದ ಬಳಿಯಿರುವ ಮಸೀದಿ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿ ಎಲ್ಇಟಿ ಕೈವಾಡವಿರುವುದಾಗಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪತಿಯ ಹತ್ಯೆ ಬಳಿಕ ಆತನ ಪತ್ನಿ ಮೇಲೂ ದಾಳಿ ನಡೆಸಿದ ಉಗ್ರರು
ಬಂಡಿಪೋರಾದಲ್ಲಿ ವ್ಯಕ್ತಿಯನ್ನು ಅಪಹರಿಸಿ ಆತನನ್ನು ಬರ್ಬರವಾಗಿ ಹತ್ಯೆಗೈದಿದ್ದ ಉಗ್ರರು ನಂತರ ಆತನ ಪತ್ನಿ ಮೇಲೂ ದಾಳಿ ನಡೆಸಿರುವ ಘಟನೆ ಶುಕ್ರವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ. 

ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಮನೆಗೆ ನುಗ್ಗಿರುವ ಉಗ್ರರು ಮಹಿಳೆ ಮೇಲೆ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದಾಳಿ ವೇಳೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಠಾಣೆಯ ಹೊರಾಂಗಣದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ. 

ಗ್ರೆನೇಡ್ ಸ್ಫೋಟಗೊಳ್ಳುತ್ತಿದ್ದಂತೆಯೇ ಠಾಣೆಯೊಳಗಿದ್ದ ಪೊಲೀಸರು, ದಾಳಿಕೋರರನ್ನು ಹಿಡಿಯುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com