2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಬಿಎಸ್ ಪಿ ಮೈತ್ರಿ: ಮಾಯಾವತಿ

ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಪಕ್ಷ ಎಸ್ ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಪಕ್ಷ ಎಸ್ ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಘೋಷಣೆ ಮಾಡಿದ್ದಾರೆ.
ಉತ್ತರಪ್ರದೇಶದ ವಿಪಕ್ಷಗಳ ಒಗ್ಗಟ್ಟಿಗೆ ಹೊಸ ಶಕ್ತಿ ತುಂಬುವ ಬೆಳವಣಿಗೆಯೊಂದು ನಡೆದಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯ ಕೊನೆಗೊಂಡ ಬಳಿಕ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮಾಯಾವತಿ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮಾಯಾವತಿ, ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ-ಬಿಎಸ್ ಪಿ ಪಕ್ಷಗಳ ಮೈತ್ರಿ ಮಾತುಕತೆ ನಡೆದಿದೆ. ಸೀಟು ಹಂಚಿಕೆ ವಿಚಾರ ಅಂತ್ಯಗೊಂಡ ಬಳಿಕ ಮೈತ್ರಿ ವಿಚಾರವನ್ನು ಘೋಷಿಸಲಾಗುತ್ತದೆ. ಲೋಕಸಭಾ ಚುನಾವಣೆಗೆ ಇನ್ನೂ ಸಮಯವಿದ್ದು, ಈಗಲೇ ಈ ಬಗ್ಗೆ ಹೇಳಿಕೆ ಬೇಡ. ಚುನಾವಣೆಗೆ ಸಮೀಪವಾಗುವಾಗ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆ. ಅಧಿಕೃತ ಘೋಷಣೆಯಾಗದಿದ್ದರೂ ಜನರಲ್ಲಿ ಈಗಾಗಲೇ ಎಸ್ಪಿ-ಬಿಎಸ್ಪಿ ಮೈತ್ರಿ ಬಗ್ಗೆ ಅರಿವು ಉಂಟಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಎಸ್ ಪಿ-ಬಿಎಸ್ ಪಿ ಮೈತ್ರಿಯಿಂದಾಗಿ ಆಡಳಿತಾ ರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು, ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಅವರೇ ತಾವೇ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಕಳೆದುಕೊಂಡಿದ್ದರು. ಆ ಮೂಲಕ ಬಿಎಸ್ ಪಿ-ಎಸ್ ಪಿ ಮೈತ್ರಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಇದೇ ಯಶಸ್ಸನ್ನು ಲೋಕಸಭಾ ಚುನಾವಣೆಗೂ ಕೊಂಡೊಯ್ಯಲು ಉಭಯ ಪಕ್ಷಗಳು ನಿರ್ಧರಿಸಿದ್ದು, ಇದೇ ಕಾರಣಕ್ಕೆ ಮೈತ್ರಿ ಕುರಿತು ಚರ್ಚೆ ನಡೆಸುತ್ತಿವೆ ಎನ್ನಲಾಗಿದೆ.
ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳ ಒಟ್ಟು ಮತ ಹಂಚಿಕೆ ಪ್ರಮಾಣ ಶೇ.41.8 ರಷ್ಟಿತ್ತು. ಬಿಜೆಪಿ ಹಾಗೂ ಅಪ್ನಾ ದಳ ಮೈತ್ರಿ ಪಕ್ಷಕ್ಕೆ 46.3 ಶೇ. ಮತ ಹಂಚಿಕೆಯಾಗಿತ್ತು. ಬಿಜೆಪಿ ಮೈತ್ರಿಕೂಟ ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 73ರಲ್ಲಿ ಜಯ ಸಾಧಿಸಿತ್ತು. ಆಗ ಎಸ್ಪಿ ಹಾಗೂ ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎಸ್ಪಿ ಕೇವಲ 5 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್ಪಿ ಶೂನ್ಯ ಸಾಧನೆ ಮಾಡಿತ್ತು.  ಶೇ.7.5 ಮತ ಹಂಚಿಕೆ ಪಡೆದಿದ್ದ ಕಾಂಗ್ರೆಸ್ 2 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಇದಾದ ಬಳಿಕ ಕಳೆದ ಮಾರ್ಚ್‌ ನಲ್ಲಿ ನಡೆದ ಗೋರಖ್‌ಪುರ ಹಾಗೂ ಫುಲ್ಪುರ ಲೋಕಸಭಾ ಉಪ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಬಿಜೆಪಿಯನ್ನು ಧೂಳೀಪಟಗೊಳಿಸಿತ್ತು. ಮಾಯಾವತಿ ಕೊನೆಯ ಕ್ಷಣದಲ್ಲಿ ಎಸ್ಪಿಗೆ ಬೆಂಬಲ ಘೋಷಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com