
ನವದೆಹಲಿ : ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ಪಂಚ ನ್ಯಾಯಾಧೀಶರನ್ನೊಳಗೊಂಡ ಪೀಠದ ಬಗ್ಗೆ ಆಡಳಿತಾತ್ಮಕ ಆದೇಶದ ಪ್ರತಿ ಕೋರಿ ಸುಪ್ರೀಂಕೋರ್ಟ್ ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರೆ.
ಐವರು ನ್ಯಾಯಾಧೀಶರನ್ನೊಳಗೊಂಡ ಪೀಠದಲ್ಲಿರುವ ಹೆಸರಿನ ಪಟ್ಟಿ ನೀಡುವಂತೆ ಹಾಗೂ ಸುಪ್ರೀಂಕೋರ್ಟ್ ಮಾಡಿರುವ ಆದೇಶದ ಪ್ರತಿ ನೀಡುವಂತೆ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಒದಗಿಸುವಂತೆ ಆರ್ ಟಿಐ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಸಿಜೆಐ ವಿರುದ್ಧದ ವಾಗ್ದಂಡನೆ ನೋಟಿಸ್ ತಿರಸ್ಕರಿಸಿದ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಪ್ರತಾಪ್ ಸಿಂಗ್ ಭಜ್ವ ಮತ್ತಿತರರು ಸುಪ್ರೀಂಕೋರ್ಟ್ ಗೆ ನಿನ್ನೆ ಅರ್ಜಿ ಸಲ್ಲಿಸಿದ್ದರು.
ಆಡಳಿತಾತ್ಮಕ ಆದೇಶದ ಮೂಲಕ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಮುಂದೆ ಪಟ್ಟಿ ಮಾಡಲಾಗಿರುವ ವಿಷಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆದೇಶ ನೀಡುವ ಅಧಿಕಾರ ಹೊಂದಿರುವುದಿಲ್ಲ. ಇಂತಹ ನ್ಯಾಯಪೀಠ ರಚನೆಯ ಆದೇಶದ ಪ್ರತಿ ನಮಗೆ ಬೇಕಾಗಿದೆ ಎಂದು ಅರ್ಜಿದಾರರು ಕೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದಕ್ಕೆ ನಿರಾಕರಿಸಿದಾಗ ಅರ್ಜಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರು.
ಈ ಆದೇಶವನ್ನು ಯಾರು ಹೊರಡಿಸಿದ್ದರು ಎಂಬ ಬಗ್ಗೆ ಮಾಹಿತಿ ತಿಳಿಯಬೇಕಾಗಿದ್ದು, ಆದೇಶದ ಪ್ರತಿ ಒದಗಿಸುವಂತೆಯೂ ಪ್ರಶಾಂತ್ ಭೂಷಣ್ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರೆ.
Advertisement