'ಆಜಾದಿ ಎಲ್ಲ ಇಲ್ಲಿ ನಡೆಯೋಲ್ಲ': ಕಲ್ಲು ತೂರಾಟಗಾರರಿಗೆ ರಾವತ್ ಖಡಕ್ ಎಚ್ಚರಿಕೆ

ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟಗಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಇಲ್ಲಿ ಆಜಾದಿ ಎಲ್ಲ ನಡೆಯೋಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟಗಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಇಲ್ಲಿ ಆಜಾದಿ ಎಲ್ಲ ನಡೆಯೋಲ್ಲ ಎಂದು ಹೇಳಿದ್ದಾರೆ.
ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹಾವಳಿಗೆ ತಮಿಳುನಾಡು ಮೂಲದ ಪ್ರವಾಸಿಗರೊಬ್ಬರು ಮೃತಪಟ್ಟ ವಿಚಾರವನ್ನು ಹಿನ್ನಲೆಯಾಗಿಸಿಕೊಂಡು ಮಾತನಾಡಿದ ರಾವತ್ ಅವರು, ಆಜಾದಿ ಎಲ್ಲ ಇಲ್ಲಿ ನಡೆಯೊಲ್ಲ, ಅದು ಸಾಧ್ಯವೂ ಇಲ್ಲ. ಇದನ್ನು ಕಾಶ್ಮೀರದ ಕೆಲ ಕಲ್ಲು ತೂರಾಟಗಾರ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. 
ಇದೇ ವೇಳೆ ಗನ್ ಹಿಡಿಯುತ್ತಿರುವ ಕಾಶ್ಮೀರಿ ಯುವಕರ ಕುರಿತು ಕಳವಳ ವ್ಯಕ್ತಪಡಿಸಿದ ರಾವತ್ ಅವರು, ಭದ್ರತಾ ಪಡೆಗಳು ತುಂಬಾ ಕ್ರೂರಿಗಳಲ್ಲ ಎಂಬುದನ್ನು ಕಾಶ್ಮೀರಿಗಳು ಅರ್ಥ ಮಾಡಿಕೊಳ್ಳಬೇಕು. ಕಲ್ಲು ತೂರಾಟ ನಡೆಸಿ ಗೊಂದಲವನ್ನುಂಟು ಮಾಡುವ ಕಿಡಿಗೇಡಿಗಳಿಗೆ ಹೇಳುವುದೇನೆಂದರೆ ಆಜಾದಿ ಇಲ್ಲಿ ನಡೆಯುವುದಿಲ್ಲ. ಅನವಶ್ಯಕವಾಗಿ ಅದನ್ನು ಮುಂದುವರೆಸಿಕೊಂಡು ಹೋಗಬೇಡಿ. ಪ್ರಾಣ ತೆಗೆಯುವುದನ್ನು ಸೇನೆ ಆನಂದಿಸುವುದಿಲ್ಲ. ಒಂದು ವೇಳೆ ನೀವು ನಮ್ಮೊಂದಿಗೆ ಹೋರಾಟ ಮಾಡುವುದಾದರೆ, ನಾವು ಕೂಡ ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ನಿಮ್ಮ ವಿರುದ್ಧ ಹೋರಾಟ ನೆಡೆಸಬೇಕಾಗುತ್ತದೆ. ಭದ್ರತಾ ಪಡೆಗಳು ತುಂಬಾ ಕ್ರೂರಿಗಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಸಿರಿಯಾ ಮತ್ತು ಪಾಕಿಸ್ತಾನವನ್ನು ನೋಡಿ... ಈ ಸಂದರ್ಭಗಳಲ್ಲಿ ಅವರು ಟ್ಯಾಂಕರ್​ ಮತ್ತು ವಾಯು ಬಲವನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಪ್ರಚೋದಿಸುತ್ತಾರೆ. ಆದರೆ, ನಮ್ಮ ಸೇನೆ ಬೃಹತ್ ಪ್ರಚೋದನೆಯ ಹೊರತಾಗಿಯೂ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ನಮ್ಮ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸಲು ಮತ್ತು ಭಯೋತ್ಪಾದಕರನ್ನು ಓಡಿಹೋಗುವುದಕ್ಕೆ ಸಹಾಯ ಮಾಡುವ ಕಿಡಿಗೇಡಿಗಳಿಗೆ ಸೇನೆ ಬೆಂಬಲ ನೀಡುವುದಿಲ್ಲ. ಆದರೆ, ಕೆಲವರು ಕಾರ್ಯಾಚರಣೆಗಳನ್ನು ಅಡ್ಡಿಪಡಿಸಲು ಕಲ್ಲುಗಳನ್ನು ತೂರುವ ಮೂಲಕ ಭದ್ರತಾ ಪಡೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದರು.
ಅಂತೆಯೇ ಕಾಶ್ಮೀರದ ಯುವಕರ ಕೋಪಕ್ಕೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿದ್ದೇನೆ. ಅಲ್ಲಿನ ಯುವಕರು ತಾವಾಗಿಯೇ ಪಾಕಿಸ್ತಾನ ಬೀಸಿದ ಬಲೆಗೆ ಬೀಳುತ್ತಿದ್ದಾರೆ. ಕಾಶ್ಮೀರದಿಂದ ಸೇನೆಯನ್ನು ಹಿಂಪಡೆಯಬಹುದು. ಆದರೆ, ಅಲ್ಲಿನ ಕಿಡಿಗೇಡಿಗಳು ನಾಗರಿಕರು ಹಾಗೂ ವಾಹನಗಳ ಮೇಲೆ ಬೆಂಕಿ ಹಚ್ಚಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ರಾವತ್ ಪ್ರಶ್ನಿಸಿದರು.
ಇನ್ನು ಕಳೆದ ವಾರವಷ್ಟೇ ಪ್ರವಾಸಿಗರೊಬ್ಬರ ವಾಹನವನ್ನು ಗುರಿಯಾಗಿರಿಸಿಕೊಂಡು ಕೆಲ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ 22 ವರ್ಷದ ತಮಿಳುನಾಡು ಮೂಲದ ಪ್ರವಾಸಿಗ ಪ್ರಾಣ ಕಳೆದುಕೊಂಡಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com