ತಿರುಪತಿ: ಟಿಡಿಪಿ ಕಾರ್ಯಕರ್ತರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಿದ ಘಟನೆ ತಿರುಪತಿಯ ಅಲಿಪಿರಿಯಲ್ಲಿ ನಡೆದಿದೆ.
ಸುಮಾರು 200 ಟಿಡಿಪಿ ಕಾರ್ಯಕರ್ತರು 'ಅಮಿತ್ ಶಾ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ಬಿಜೆಪಿ ಅಧ್ಯಕ್ಷಕರಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಕೆಲ ಕಾರ್ಯಕರ್ತರು ಅಮಿತ್ ಶಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ.
ತಿರುಪತಿ ದರ್ಶನ ಮುಗಿಸಿ ಹೊರಬರುತ್ತಿದ್ದ ಅಮಿತ್ ಶಾ ವಿರುದ್ಧ ಅಲಿಪಿರಿ ಗರುಡಾ ವೃತ್ತದಲ್ಲಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಪ್ರತಿಭಟನಾಕಾರರು 'ಅಮಿತ್ ಶಾ ಗೋ ಬ್ಯಾಕ್' ಎಂಬ ಘೋಷಣೆ ಕೂಗಿದರು. ಅಮಿತ್ ಶಾ ಅವರ ವಿರುದ್ಧದ ಪ್ರತಿಭಟನೆ ನಿಮಿತ್ತ ಜನರನ್ನು ನಿಯಂತ್ರಿಸಲು ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಆಂಧ್ರಪ್ರದೇಶಕ್ಕೆ ನೀಡಿದ ಎಲ್ಲ ಭರವಸೆಗಳನ್ನೂ ಬಿಜೆಪಿ ಮರೆತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯಕ್ಕೆ ವಂಚನೆ ಮಾಡಿದ ಬಳಿಕವೂ ಪವಿತ್ರ ದೇಗುಲಕ್ಕೆ ಏಕೆ ಬಂದರು ಎಂದು ಪ್ರಶ್ನಿಸಿದರು.