ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಿರುವ ಸಿಬಿಎಸ್ ಇ ಅಧಿಸೂಚನೆಯನ್ನು ಶುಕ್ರವಾರ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಚಂದ್ರಶೇಖರ್ ಅವರನ್ನೊಳಗೊಂಡ ಪೀಠ ಸಿಬಿಎಸ್ ಇ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದೆ. ಆದರೆ ಮುಕ್ತ ಶಾಲೆಗಳಲ್ಲಿ ಅಥವಾ ಖಾಸಗಿಯಾಗಿ ಓದಿದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಅಸಂವಿಧಾನಿಕ ಎಂದಿದೆ.
ಜನವರಿ 22ರಂದು ಸಿಬಿಎಸ್ ಇ ಹೊರಡಿಸಿದ್ದ ನೀಟ್ ಅಧಿಸೂಚನೆಯಲ್ಲಿ, ನೀಟ್ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿರುವುದು ಕಾನೂನುಬದ್ಧ ಮತ್ತು ಮಾನ್ಯವಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಿಬಿಎಸ್ ಇಯ ಈ ನಿರ್ಧಾರದಿಂದಾಗಿ 25 ವರ್ಷ ಮೇಲ್ಪಟ್ಟ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್, ಬಿಡಿಎಸ್ ಹಾಗೂ ಆಯುಷ್ ಕೋರ್ಸ್ ಗಾಗಿ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಶಿಕ್ಷಣ ಪಡೆಯುವ ನಮ್ಮ ಹಕ್ಕಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಹಲವು ವೈದ್ಯಕೀಯ ಆಕಾಂಕ್ಷಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.