ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿದೆ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿ

ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಶೀಘ್ರ ಅಗ್ನಿ 5 ಖಂಡಾತರ ಕ್ಷಿಪಣಿ ಸೇನೆಗೆ ಸೇರ್ಪಡೆಯಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಶೀಘ್ರ ಅಗ್ನಿ 5 ಖಂಡಾತರ ಕ್ಷಿಪಣಿ ಸೇನೆಗೆ ಸೇರ್ಪಡೆಯಾಗಲಿದೆ.
ರಕ್ಷಣಾ ಮೂಲಗಳು ತಿಳಿಸಿರುವಂತೆ ಈಗಾಗಲೇ ಅಗ್ನಿ-5 ಕ್ಷಿಪಣಿಯ ಎಲ್ಲ ಪರೀಕ್ಷಾರ್ಥ ಉಡಾವಣೆಗಳು ಯಶಸ್ವಿಯಾಗಿದ್ದು, ಕ್ಷಿಪಣಿ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತ್ತು. ಕಳೆದ ಜನವರಿಯಲ್ಲಿ ನಡೆಸಲಾದ ಪ್ರಾಯೋಗಿಕ ಪರೀಕ್ಷೆ ಯಶಸ್ವಿ ಯಾಗಿದ್ದು, ಕೊನೆಯ ಹಂತದ ಪ್ರಯೋಗ ಮಾಸಾಂತ್ಯ ದೊಳಗೆ ನಡೆಯುವ ಸಾಧ್ಯತೆ ಯಿದೆ. ಈ ಪರೀಕ್ಷೆ ಯಶಸ್ವಿಯಾದರೆ ಭಾರತೀಯ ಸೇನೆಗೆ ಕ್ಷಿಪಣಿ ಸೇರ್ಪಡೆಯಾಗಲಿದೆ. 2012 ಏಪ್ರಿಲ್ ಹಾಗೂ ಸೆಪ್ಟೆಂಬರ್, 2015ರ ಜನವರಿ, 2016ರ ಡಿಸೆಂಬರ್​ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. 
ಕಳೆದ ಜನವರಿಯಲ್ಲಿ ನಡೆಸಿದ್ದ ಪರೀಕ್ಷೆ ಯಶಸ್ವಿಯಾಗಿತ್ತು. ಜಲಂತರ್ಗಾಮಿಯಿಂದ ಕ್ಷಿಪಣಿ ಹಾರಿಸುವಲ್ಲಿ ಕೆಲ ತಾಂತ್ರಿಕ ತೊಂದರೆ ಎದುರಾಗಿದೆ. ಮುಂದಿನ ಪರೀಕ್ಷೆಯಲ್ಲಿ ಇದು ನಿವಾರಣೆಯಾದರೆ ಅಗ್ನಿ-5 ಸೇನೆಗೆ ಸೇರಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಅಗ್ನಿ-5 ಕ್ಷಿಪಣಿಯನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲು ಬಹುತೇಕ ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಭಾರತೀಯ ಸೇನೆ ಮತ್ತು ಡಿಆರ್ ಡಿಒ ಸಂಸ್ಥೆ ಈ ಸಂಬಂಧ ಪ್ರಾಥಮಿಕ ಕಾರ್ಯ ಮುಕ್ತಾಯಗೊಳಿಸಿದೆ ಎನ್ನಲಾಗಿದೆ. 
ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ 20 ವರ್ಷಗಳು ತುಂಬಿದ ಸಮಯದಲ್ಲಿಯೇ ಮಹತ್ವಾಕಾಂಕ್ಷಿ ಕ್ಷಿಪಣಿ ಅಗ್ನಿ-5 ಸೇನೆಗೆ ಸೇರ್ಪಡೆಗೊಳ್ಳಲು ಸಜ್ಜಾಗುತ್ತಿರುವುದು ಭಾರತೀಯ ರಕ್ಷಣಾ ಕ್ಷೇತ್ರದ ಸಂಶೋಧನೆಯ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ. ಒಂದು ವೇಳೆ ಮಾಸಾಂತ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿದ್ದೇ ಆದರೆ ಕ್ಷಿಪಣಿಯ ಸೇನಾ ನಿಯೋಜನೆ ದೃಡವಾಗುತ್ತದೆ, ಆಗ ಭಾರತ ಕೂಡ 5 ಸಾವಿರ ಕಿ.ಮೀ ಗುರಿ ತಲುಪುವ ಅಣ್ವಸ್ತ್ರ ಕ್ಷಿಪಣಿ ಹೊಂದಿದ ವಿಶ್ವದ ಬೆರಳೆಣಿಕೆ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ.
ಅಗ್ನಿ-5 ಕ್ಷಿಪಣಿ ವಿಶೇಷತೆ
5,500 ರಿಂದ 5,800 ಕಿ.ಮೀ ಗುರಿ ತಲುಪುವ ಸಾಮರ್ಥ್ಯವನ್ನು ಅಗ್ನಿ 5 ಕ್ಷಿಪಣಿ ಹೊಂದಿದ್ದು, ಸುಮಾರು 1500 ಕೆ.ಜಿ. ತೂಕದ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಶಕ್ತಿ ಈ ಕ್ಷಿಪಣಿಗಿದೆ.  ಡಿಆರ್​ಡಿಒನಿಂದ ಅಭಿವೃದ್ಧಿಗೊಂಡಿರುವ ಕ್ಷಿಪಣಿಯಾಗಿದ್ದು, ಚೀನಾ, ಆಫ್ರಿಕಾ ಹಾಗೂ ಐರೋಪ್ಯ ದೇಶಗಳ ಮೇಲೆ ದಾಳಿ ಮಾಡಬಹುದಾಗಿದೆ. 5 ಸಾವಿರ ಕಿ.ಮೀಗೂ ಅಧಿಕ ದೂರ ತಲುಪುವ ಕ್ಷಿಪಣಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ಪಟ್ಟಿಗೆ ಭಾರತ ಸೇರಲಿದೆ.
ಭಾರತದಲ್ಲಿರುವ ಹಾಲಿ ಕ್ಷಿಪಣಿಗಳ ಸಾಮರ್ಥ್ಯ
ಪೃಥ್ವಿ-2:  350 ಕಿ.ಮೀ ಸಾಮರ್ಥ್ಯ, ಅಗ್ನಿ-1, 700 ಕಿ.ಮೀ ಸಾಮರ್ಥ್ಯ, ಅಗ್ನಿ-2, 2,000 ಕಿ.ಮೀ ಸಾಮರ್ಥ್ಯ ಮತ್ತು ಅಗ್ನಿ-3, 3,000 ಕಿ.ಮೀ ಸಾಮರ್ಥ್ಯ
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಭಾರತದ ಫೈಟರ್ ಜೆಟ್ ಗಳು
ಸುಖೋಯ್- 30 ಎಂಕೆಐ, ಮಿರಾಜ್- 2000, ಜಾಗ್ವಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com