
ವಲ್ಸದ್(ಗುಜರಾತ್): ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರ ಮೇಲೆ ಹಣ ಎಸೆಯುವುದು ಭಾರತದಲ್ಲಿ ಅಸಾಮಾನ್ಯವೇನಲ್ಲ. ಈ ವಿಷಯದಲ್ಲಿ ಗುಜರಾತ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ.
ನಿನ್ನೆ ಗುಜರಾತ್ ನ ವಲ್ಸದ್ ಜಿಲ್ಲೆಯಲ್ಲಿ ಸಹಾಯಾರ್ಥ ಕಾರ್ಯಕ್ರಮದಲ್ಲಿ ಗಾಯಕ ಹಾಡುತ್ತಿದ್ದಾಗ ಅವರ ಮೇಲೆ ಸುಮಾರು 50 ಲಕ್ಷ ರೂಪಾಯಿ ಹಣ ಎಸೆಯಲಾಗಿದೆ. ಪ್ರೇಕ್ಷಕರು 10, 200, 500 ರೂಪಾಯಿಗಳ ನೋಟುಗಳನ್ನು ಜಾನಪದ ಗಾಯಕರಾದ ಗೀತಾ ರಬರ್ ಮತ್ತು ಬ್ರಿಜ್ರಜ್ದನ್ ಗಾದ್ವಿ ಅವರು ಹಾಡುತ್ತಿದ್ದಾಗ ಅವರ ಮೇಲೆ ಎಸೆಯುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಜಿಲ್ಲೆಯ ಕಲ್ವಾಡ ಗ್ರಾಮದ ಸರ್ಪಂಚ್ ಆಶಿಶ್ ಪಟೇಲ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಜಲರಾಮ್ ಮಾನವ್ ಟ್ರಸ್ಟ್ ಗೆ ಸಹಾಯಾರ್ಥವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಿಂದ ಬಂದ ಹಣದಲ್ಲಿ ಗ್ರಾಮಕ್ಕೆ ಆಂಬ್ಯುಲೆನ್ಸ್ ಖರೀದಿಸುವುದು ಅವರ ಯೋಜನೆಯಾಗಿತ್ತು.
ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಆಶಿಶ್ ಪಟೇಲ್, ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಇಲ್ಲಿ ಸಂಗ್ರಹಿಸಿದ ಹಣವನ್ನು ಟ್ರಸ್ಟ್ ಗೆ ನೀಡುತ್ತೇವೆ. ಇದುವರೆಗೆ ಸುಮಾರು 50 ಲಕ್ಷ ರೂಪಯಿಯಾಗಿದೆ ಎಂದರು.
2016ರಲ್ಲಿ ನವ್ಸಾರಿ ಜಿಲ್ಲೆಯಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುಗಾರರ ಮೇಲೆ ಹಣ ಎಸೆದು ದೇಶಾದ್ಯಂತ ವಿವಾದವುಂಟಾಗಿತ್ತು.
Advertisement