ಚೆನ್ನೈ: ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದಿದ್ದು ಇಂದು ನಡೆದ ಪೊಲೀಸರ ಗೋಲಿಬಾರ್ ನಲ್ಲಿ ಓರ್ವ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿವೆ.
ತೂತುಕೂಡಿಯ ಅಣ್ಣಾ ನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರು ಎರಡು ಪೊಲೀಸ್ ವ್ಯಾನ್ ಗಳಿಗೆ ಬೆಂಕಿ ಹಚ್ಚಿದ್ದು ಈ ವೇಳೆ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಈ ವೇಳೆ ಓರ್ವ ಮೃತಪಟ್ಟಿದ್ದು ನಾಲ್ವರಿಗೆ ಗಂಭೀರ ಗಾಯವಾಗಿದೆ.
ಮೃತಪಟ್ಟಿರುವ ಪ್ರತಿಭಟನಾಕಾರರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಅವುಗಳನ್ನು ಸಂಸ್ಕರಿಸುವಂತೆ ಹಾಗೂ ಪರಿಸ್ಥಿತಿಯ ವಸ್ತುಸ್ಥಿತಿ ವರದಿ ನೀಡುವಂತೆ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಪ್ರತಿಭಟನಾ ಕಾವು ಹೆಚ್ಚಾಗುತ್ತಿದ್ದಂತೆ ಪ್ರತಿಭಟನೆ ಕುರಿತಂತೆ ಮಾಹಿತಿ ಪ್ರಸಾರವಾಗದಂತೆ ತಡೆಯಲು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಪೊಲೀಸರು ಗೋಲಿಬಾರ್ ಮಾಡಿದ್ದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಈಗ ಕೇಂದ್ರ ಗೃಹ ಇಲಾಖೆ ವರದಿ ಕೇಳಿದೆ. ಪೊಲೀಸರ ಕ್ರಮದಿಂದಾಗಿ 9 ಜನರು ಮೃತಪಟ್ಟಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸ್ವಾಮಿ ಪಡಿಸಿದ್ದಾರೆ.
ಪೊಲೀಸರ ಕ್ರಮಕ್ಕೂ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಡಿಜಿಪಿ, ಎಸ್ ಪಿ, ಜಿಲ್ಲಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ರಾಜಕೀಯ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಹ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ನೋಟಿಸ್ ಜಾರಿಗೊಳಿಸಿದರೆ, ಮದ್ರಾಸ್ ಹೈಕೋರ್ಟ್ ಸ್ಟೆರ್ಲೈಟ್ ಕಂಪನಿಯಿಂದ ನಿರ್ಮಾಣವಾಗುತ್ತಿದ್ದ ಹೊಸ ಕಾಮಗಾರಿಗೆ ತಡೆ ನೀಡಿದೆ.
ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ವರದಿ ಕೇಳಿದ ಬೆನ್ನಲ್ಲೆ ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಆದೇಶಿಸಿದ್ದು ನಿವೃತ್ತ ನ್ಯಾ. ಅರುಣಾ ಜಗದೀಶನ್ ತನಿಖೆ ನಡೆಸಲಿದ್ದಾರೆ.