ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್, ಸಾವಿನ ಸುಳಿವು ನೀಡಿದ್ದ ಶಶಿ ತರೂರ್ ಪತ್ನಿ!

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಸುನಂದ ಪುಷ್ಕರ್ ಸಾವಿಗೀಡಾಗುವ ಮುನ್ನ ಕೆಲ ದಿನಗಳ ಹಿಂದೆಯೇ ತಮ್ಮ ಸಾವಿನ ಸುಳಿವು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ.
ನವದೆಹಲಿ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಸುನಂದ ಪುಷ್ಕರ್ ಸಾವಿಗೀಡಾಗುವ ಮುನ್ನ ಕೆಲ ದಿನಗಳ ಹಿಂದೆಯೇ ತಮ್ಮ ಸಾವಿನ ಸುಳಿವು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಸುನಂದಾ ಪುಷ್ಕರ್ ಸಾವು ಪ್ರಕರಣ ಸಂಬಂಧ ಇಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಈ ಚಾರ್ಜ್ ಶೀಟ್ ನಲ್ಲಿ ಸುನಂದಾ ಸಾವಿಗೀಡಾಗುವ ಕೆಲವೇ ದಿನಗಳ ಮುಂದು ತಮ್ಮ ಗಂಡ ಶಶಿತರೂರ್ ಗೆ ತಮ್ಮ ಸಾವಿನ ಕುರಿತ ಸಂದೇಶಗಳನ್ನು ರವಾನಿಸಿದ್ದರಂತೆ. ದೆಹಲಿ ಪೊಲೀಸ್ ಮೂಲಗಳು ತಿಳಿಸಿರುವಂತೆ, ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್‌ ಸಾವಿಗೀಡಾಗಿರುವ 8 ದಿನಕ್ಕೂ ಮುನ್ನ ಅಂದರೆ ಜನವರಿ 8ರಂದು ಸುನಂದಾ, ತಮ್ಮ ಪತಿ ಶಶಿ ತರೂರ್‌ಗೆ 'ನನಗೆ ಬದುಕುವ ಯಾವುದೇ ಬಯಕೆ ಇಲ್ಲ. ನಾನು ಸಾವಿಗಾಗಿ ಪ್ರಾರ್ಥಿಸುತ್ತಿದ್ದೇನೆ' ಎಂದು ಇ-ಮೇಲ್‌ ಮಾಡಿದ್ದಾರೆ ಎನ್ನಲಾಗಿದೆ.
ಅಂತೆಯೇ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಸುನಂದಾ ಪುಷ್ಕರ್ ಅವರ ಈ ಹೇಳಿಕೆಗಳನ್ನೇ ಮರಣಪೂರ್ವ ಹೇಳಿಕೆಯಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. 
ಜೂನ್‌ 5ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಸುನಂದಾ ಪುಷ್ಕರ್ ಸಾವು ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಪ್ರಕರಣ ಕುರಿತಾದ ತೀರ್ಪನ್ನು ಜೂನ್ 5ಕ್ಕೆ ಕಾಯ್ದಿರಿಸಿದ್ದಾರೆ. ಶಶಿ ತರೂರ್ ಅವರನ್ನು ಅಪರಾಧಿ ಎನ್ನಲು ಪ್ರಾಸಿಕ್ಯೂಷನ್ ಬಳಿ ಸಾಕಷ್ಟು ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ತೀರ್ಪು ಕಾಯ್ದಿರಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಸುನಂದಾ ಪುಷ್ಕರ್‌ ಅವರ ಕೋಣೆಯಲ್ಲಿ ಸುಮಾರು 27 ಆಲ್ಪ್ರಾಕ್ಸ್ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಎಷ್ಟು ಮಾತ್ರೆಗಳನ್ನು ಆಕೆ ಸೇವಿಸಿದ್ದಾರೆ ಎನ್ನುವ ಕುರಿತು ತಿಳಿದಿಲ್ಲ. ಆಕೆ ವಿಷದಿಂದಾಗಿ ಮೃತಪಟ್ಟಿದ್ದಾಳೆ. ಪ್ರಕರಣದಲ್ಲಿ ಶಶಿ ತರೂರ್‌ ಪ್ರಮುಖ ಆರೋಪಿ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದರು. ಇದಲ್ಲದೆ, ವಿಶೇಷ ತನಿಖಾ ತಂಡ ಚಾರ್ಜ್‌ ಶೀಟ್‌ನಲ್ಲಿ ಹೇಳಿರುವಂತೆ, ಶಶಿ ತರೂರ್‌ ಮತ್ತು ಸುನಂದಾ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಮಧ್ಯೆ ಸುನಂದಾ ಪುಷ್ಕರ್‌ ಅವರು ಖಿನ್ನತೆಗೆ ಜಾರುತ್ತಿದ್ದರು, ಕೆಲ ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಆಕೆಯ ಸಾವಿಗೂ ಕೆಲ ದಿನಗಳ ಮುಂದೆ ತರೂರ್‌ ಅವರು ಸುನಂದಾ ಅವರ ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಅವರ ಕರೆಗಳನ್ನು ಕಡಿತಗೊಳಿಸಲು ಮುಂದಾಗಿದ್ದರು. ಆನಂತರ ಸುನಂದಾ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತರೂರ್‌ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಅಲ್ಲೂ ಕೂಡ ಅವರನ್ನು ಕಡೆಗಣಿಸಲಾಗಿದೆ. ಗಾಯದ ಗುರುತುಗಳು ಗಂಭೀರವಾಗಿಲ್ಲದಿದ್ದರೂ ದಂಪತಿ ನಡುವೆ ಜಗಳವಾಗಿರುವುದು ಸತ್ಯ ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com