
ಉತ್ತರ ಪ್ರದೇಶ: 2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೈರಾನ ಲೋಕಸಭೆ ಸ್ಥಾನವನ್ನು ಆಡಳಿತಾರೂಢ ಬಿಜೆಪಿ ಪಕ್ಷದಿಂದ ಕಸಿದುಕೊಳ್ಳುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದು, ಕೇಸರಿ ಪಡೆಗೆ ತೀವ್ರ ಹಿನ್ನೆಡೆಯಾಗಿದೆ.
ಬಿಜೆಪಿ ಅಭ್ಯರ್ಥಿ ಮೃಗಾಂಕಾ ಸಿಂಗ್ ವಿರುದ್ಧ ಆರ್ ಎಲ್ ಡಿ ಅಭ್ಯರ್ಥಿ ತಾಬಾಸಾಮ್ ಹಸನ್ ಜಯಬೇರಿ ಬಾರಿಸಿದ್ದಾರೆ.ಮಾಜಿ ಶಾಸಕರಾಗಿದ್ದ ಹಸನ್ ಅವರನ್ನು ಕಾಂಗ್ರೆಸ್ , ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷಗಳು ಬೆಂಬಲಿಸಿದ್ದವು.
ಗೋರಕ್ ಪುರ ಹಾಗೂ ಫಲ್ಪುರ್ ಲೋಕಸಭಾ ಉಪಚುನಾವಣೆಯಲ್ಲಿ ಬಿಎಸ್ ಪಿ ಹಾಗೂ ಸಮಾಜವಾದಿ ಪಕ್ಷಗಳು ಬಿಜೆಪಿಯನ್ನು ಸೋಲಿಸಿದ ಬಳಿಕ ಈ ಚುನಾವಣೆ ಅವುಗಳಿಗೆ ಮತ್ತೊಂದು ಪರೀಕ್ಷೆಯಾಗಿ ಪರಿಣಮಿಸಿತ್ತು.
ಬಿಜೆಪಿ ಸಂಸದ ಹುಕುಂ ಸಿಂಗ್ ಫೆಬ್ರವರಿ ತಿಂಗಳಲ್ಲಿ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಕೈರಾನ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಅನುಕಂಪ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹುಕುಂ ಸಿಂಗ್ ಮಗಳು ಮ್ರಿಗಾಂಕಾ ಸಿಂಗ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿತ್ತು. ಆದರೆ. ಅನುಕಂಪ ಇಲ್ಲಿ ವರ್ಕ್ ಔಟ್ ಆಗಿಲ್ಲ. ವಿರೋಧಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿ ಇಲ್ಲಿ ಸೋಲಿಗೆ ಶರಣಾಗಿದೆ.
ಈ ಗೆಲುವಿನ ಉತ್ಸಾಹದಲ್ಲಿರುವ ವಿರೋಧ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳುವ ವಿಶ್ವಾಸ ವ್ಯಕ್ತಪಡಿಸಿವೆ.
Advertisement