ನಿಫಾ ವೈರಸ್ ಗೆ ಕೇರಳದಲ್ಲಿ ಮತ್ತೆರಡು ಮಂದಿ ಬಲಿ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

ನಿಫಾ ವೈರಸ್ ಗೆ ಮತ್ತೆರಡು ಮಂದಿ ಕೇರಳದಲ್ಲಿ ಬಲಿಯಾಗಿದ್ದು, ಈ ಮೂಲಕ ಸಾವಿನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಕೋಝಿಕ್ಕೋಡು(ಕೇರಳ): ನಿಫಾ ವೈರಸ್ ಗೆ ಮತ್ತೆರಡು ಮಂದಿ ಕೇರಳದಲ್ಲಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 15ಕ್ಕೇರಿದೆ. ಮೃತಪಟ್ಟ ಇಬ್ಬರೂ ಕೋಝಿಕ್ಕೋಡಿನವರಾಗಿದ್ದಾರೆ.

ನಿಫಾ ವೈರಸ್ ಗೆ ತುತ್ತಾದವರ ಸಂಖ್ಯೆ 17ಕ್ಕೇರಿದ್ದು ಪುಣೆಯ ರಾಷ್ಟ್ರೀಯ ವಿರೊಲಜಿ ಸಂಸ್ಥೆಗೆ ಕಳುಹಿಸಿದ ಕರಸ್ಸೆರಿಯ 28 ವರ್ಷದ ಬಾಲಕನ ರಕ್ತದ ಮಾದರಿಯಲ್ಲಿ ನಿಫಾ ವೈರಾಣು ಇರುವುದು ದೃಢಪಟ್ಟಿದೆ.

ನಿನ್ನೆ ನಿಫಾ ವೈರಾಣುವಿನ ಸೋಂಕಿನ ಶಂಕೆಯಿದ್ದ ಕೇರಳ ಮೂಲದ ಯೋಧ ಕೋಲ್ಕತ್ತಾದಲ್ಲಿ ಮೃತಪಟ್ಟಿದ್ದರು. ಕೇರಳದ ಸೀನು ಪ್ರಸಾದ್ ಕೋಲ್ಕತ್ತಾದ ಫೋರ್ಟ್ ವಿಲಿಯಮ್ ಗೆ ಭಾರತೀಯ ಸೇನೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೇರಳಕ್ಕೆ ಒಂದು ತಿಂಗಳ ರಜೆ ಮೇಲೆ ಹೋಗಿದ್ದ ಸೀನು ಪ್ರಸಾದ್ ಮೇ 20ರಂದು ವಾಪಸ್ಸಾಗಿದ್ದರು.

ಸೀನು ಪ್ರಸಾದ್ ಅವರ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಲಾಗಿದೆ. ನಿಫಾ ವೈರಸ್ ನ್ನು ಪತ್ತೆ ಮಾಡುವ ದೇಶದಲ್ಲಿರುವ ಏಕೈಕ ಸಂಸ್ಥೆ ಇದಾಗಿದೆ.

ಪ್ರಾಣಾಂತಿಕ ವೈರಸ್ ಆಗಿರುವ ನಿಫಾ ಮನುಷ್ಯರು ಮತ್ತು ಪ್ರಾಣಿಗಳೆರಡರ ದೇಹಕ್ಕೆ ಯಾವುದೇ ರೀತಿಯ ಸಂಪರ್ಕದಿಂದ ಹರಡುತ್ತದೆ. ನಿಫಾ ವೈರಸ್ ಕೇರಳದ ಕೋಝಿಕ್ಕೋಡಿನಲ್ಲಿ ಮೊದಲು ಪತ್ತೆಯಾಗಿದೆ. ಇಲ್ಲಿನ ಮನೆಯೊಂದರ ಬಳಸದೆ ಇದ್ದ ಬಾವಿಯಲ್ಲಿ ಸತ್ತ ಬಾವಲಿ ಪತ್ತೆಯಾಗಿತ್ತು. ಈ ಮನೆಯಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಜ್ವರ, ತಲೆನೋವು, ಅರೆನಿದ್ರಾವಸ್ಥೆ, ಉಸಿರಾಟದ ತೊಂದರೆ, ದಿಗ್ಭ್ರಮೆ ಹುಟ್ಟಿಸುವ ಗುಣಗಳು ನಿಫಾ ವೈರಸ್ ನ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ನಂತರ 24 ಗಂಟೆಯಿಂದ 48 ಗಂಟೆಗಳಲ್ಲಿ ವ್ಯಕ್ತಿಯು ಕೋಮಾಕ್ಕೆ ಹೋಗುವ ಸಾಧ್ಯತೆಗಳಿವೆ. ಬಾವಲಿಯಿಂದ ಮುಖ್ಯವಾಗಿ ಈ ವೈರಸ್ ಹರಡಲಿದ್ದು, ಇದಕ್ಕೆ ಇನ್ನೂ ಲಸಿಕೆ ಕಂಡುಹಿಡಿದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com