ಮಹಾರಾಷ್ಟ್ರ: 13 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ 'ಅವನಿ' ಕೊನೆಗೂ ಹತ್ಯೆ

ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ. 
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ನ್ಯಾಯಾಲಯದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗಿದ್ದವು. 
ಕಳೆದ 3 ತಿಂಗಳಿಂದ ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳೊಂದಿಗೆ ಸಜ್ಜಾಗಿದ್ದ 150ಕ್ಕೂ ಹೆಚ್ಚು ಸಿಬ್ಬಂದಿ, ಆನೆಗಳು ಮತ್ತು ತಜ್ಞ ಟ್ರ್ಯಾಕರ್ ಗಳು ಮತ್ತು ಶೂಟರ್ ಗಳು ಹುಲಿ ಬೇಟೆಯಲ್ಲಿ ತೊಡಗಿದ್ದರು. ಹುಲಿಯ ಜಾಡು ಹಿಡಿಯಲು ಟ್ರ್ಯಾಪ್ ಕ್ಯಾಮೆರಾ ಹಾಗೂ ಡ್ರೋನ್ ಬಳಕೆ ಮಾಡಲಾಗಿತ್ತು. 
ಅವನಿ 2012ರಲ್ಲಿ ಮೊದಲ ಬಾರಿಗೆ ಯಾವತ್ಮಲ್ ಅರಣ್ಯದಲ್ಲಿ ಕಾಣಿಸಿಕೊಂಡಿತ್ತ. ದಟ್ಟ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ 13 ಮಂದಿ ಮೃತದೇಹಗಳು ಪತ್ತೆಯಾಗಿದ್ದವು. 13 ಮಂದಿಯ ಪೈಕಿ 5 ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು. ಅರಣ್ಯ ಪ್ರದೇಶದಲ್ಲಿ ಅವನಿ ಹೊರತುಪಡಿಸಿದರೆ, ಒಂದು ಗಂಡು ಹುಲಿ ಮಾತ್ರ ಇದೆ ಎಂಬುದು ಸಿಬ್ಬಂದಿಗಳಿಗೆ ತಿಳಿದುಬಂದಿತ್ತು. ಆ ಹುಲಿಯ ಡಿಎನ್ಎ ಒಂದು ಮೃತದೇಹದಲ್ಲಿ ಮಾತ್ರವೇ ಪತ್ತೆಯಾಗಿತ್ತು. 
ಬೆಂಗಳೂರು ಮೂಲಕ ಹೋರಾಟಕಾರ ಪ್ರೇರಣಾ ಚಕ್ರಬೋರ್ಟಿಯವರು ಪ್ರತಿಕ್ರಿಯೆ ನೀಡಿ, ಹುಲಿಗೆ ವಿನಾಕಾರಣ ಹಂತಕಿ ಪಟ್ಟವನ್ನು ಕಟ್ಟಲಾಗಿದೆ. 13 ಮಂದಿಯನ್ನು ಈ ಹುಲಿಯೇ ತಿಂದಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಹುಲಿ ಅರಣ್ಯ ಬಿಟ್ಟು ಹೋಗಿಲ್ಲ. ಆದರೆ, ಮಾನವನೇ ತಪ್ಪಾಗಿ ಅದರ ಪ್ರದೇಶಕ್ಕೆ ಬಂದಿದ್ದಾನೆ. ಹೀಗಾಗಿ ಇದು ಮನುಷ್ಯ ಮಾಡಿದ್ದೇ ತಪ್ಪು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com