ಸಂಗ್ರಹ ಚಿತ್ರ
ದೇಶ
ನಿಷೇಧಾಜ್ಞೆ ನಡುವೆ ಅಯ್ಯಪ್ಪನ ದರ್ಶನಕ್ಕೆ ವ್ಯವಸ್ಥೆ!
ಕೇರಳದ ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ಇದೇ ಸೋಮವಾರದಿಂದ ತೆರೆಯುತ್ತಿದ್ದು, ನಿಷೇಧಾಜ್ಞೆ ನಡುವೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ತಿರುವನಂತಪುರಂ: ಕೇರಳದ ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ಇದೇ ಸೋಮವಾರದಿಂದ ತೆರೆಯುತ್ತಿದ್ದು, ನಿಷೇಧಾಜ್ಞೆ ನಡುವೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ನವೆಂಬರ್ 5ರಂದು ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಈ ಮಧ್ಯೆ ಸನ್ನಿಧಾನಂ, ಪಂಪಾ, ನೀಳಕ್ಕಲ್ ಹಾಗೂ ಎಲವುಂಕಾಲ್ ನಲ್ಲಿ ನವೆಂಬರ್ 4ರಿಂದ 6ರವರೆಗೆ ಸೆಕ್ಷನ್ 144 ಜಾರಿ ಮಾಡಲು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನ ನಿಯೋಜಿಸಲು ಮುಂದಾಗಿದ್ದಾರೆ.
10 ರಿಂದ 50 ವರ್ಷ ನಡುವಿನ ಮಹಿಳೆಯರು ಕೂಡ ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕಳೆದ ತಿಂಗಳು ಶಬರಿಮಲೆ ದೇವಾಲಯದ ಬಳಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಹಿಂಸಾಚಾರ ಪ್ರಕರಣಗಳು ಹಾಗೂ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಲಾಗಿತ್ತು. ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದು, ವಾಪಸ್ ಕಳುಹಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಹಲವರು ಗಾಯಗೊಂಡಿದ್ದರು.
ಇದರಿಂದ ಕೇರಳ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. ಈ ಸಂಬಂಧ ಈವರೆಗೆ 3505 ಮಂದಿಯನ್ನು ಬಂಧಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು 529 ಕೇಸ್ಗಳು ದಾಖಲಾಗಿವೆ. ಶಬರಿಮಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮದ ಬಗ್ಗೆ ವರದಿ ನೀಡಿವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಇದೇ ಕಾರಣಕ್ಕೆ ಇದು ಮತ್ತೆ ಪುನರಾವರ್ತನೆಯಾಗದಿರಲಿ ಎಂದು ಕೇರಳ ಸರ್ಕಾರ ಹಾಗೂ ಸ್ಥಳೀಯ ಜಿಲ್ಲಾಡಳಿತ ಇಂತಹುದೊಂದು ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ