'ಬಿಳಿ ಕುದುರೆ ಮೇಲೆ ಕುಳಿತು ಖಡ್ಗವನ್ನು ಮೇಲಕ್ಕೆತ್ತಿದ ಹೀರೋ ಪ್ರಧಾನಿ ಮೋದಿ': ಶಶಿ ತರೂರ್ ಟೀಕೆ

ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಕೆಣಕಿದ್ದಾರೆ. ಬಿಳಿ ಕುದುರೆ ಮೇಲೆ ಕುಳಿತು ಕೈಯಲ್ಲಿ ಖಡ್ಗವನ್ನು ...
ಶಶಿ ತರೂರ್
ಶಶಿ ತರೂರ್

ಕೋಲ್ಕತ್ತಾ: ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಕೆಣಕಿದ್ದಾರೆ. ಬಿಳಿ ಕುದುರೆ ಮೇಲೆ ಕೈಯಲ್ಲಿ ಖಡ್ಗವನ್ನು ಎತ್ತರವಾಗಿ ಹಿಡಿದು ಕುಳಿತ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅವರು ನಿನ್ನೆ ಕೋಲ್ಕತ್ತಾದಲ್ಲಿ ಕೈಗಾರಿಕಾ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮೋದಿಯವರದ್ದು ಏಕಮಾತ್ರ ಸರ್ಕಾರ ಉಳಿದವರು ಅವರು ಹೇಳಿದಂತೆ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿಯವರು ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ, ಅದನ್ನು ಕೈಯಲ್ಲಿ ಮುಟ್ಟಲು ಸಾಧ್ಯವಿಲ್ಲ, ಚಪ್ಪಲಿಯಲ್ಲಿ ಹೊಡೆದು ಕೆಳಗೆ ಬೀಳಿಸಲು ಕೂಡ ಆಗುವುದಿಲ್ಲ ಎಂದು ಆರ್ ಎಸ್ಎಸ್ ಕಾರ್ಯಕರ್ತರೊಬ್ಬರು ಹೇಳಿದ್ದನ್ನು ತನಗೆ ಪತ್ರಕರ್ತರೊಬ್ಬರು ಹೇಳಿದ್ದರು ಎಂದು ಕಳೆದ ವಾರ ಶಶಿ ತರೂರು ಅವರು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ರಸ್ತಾಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಬಗ್ಗೆ ದೆಹಲಿ ಕೋರ್ಟ್ ನಲ್ಲಿ ಶಶಿ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ದಾಖಲಾಗಿದೆ.

ಇದೀಗ ಮತ್ತೆ ಪ್ರಧಾನಿ ಮೋದಿಯವರನ್ನು ಟೀಕಿಸಿರುವ ಶಶಿ ತರೂರ್, ಮೋದಿಯವರದ್ದು ಏಕಮಾತ್ರ ವ್ಯಕ್ತಿಯ ಅಧಿಕಾರವಿರುವ ಕೇಂದ್ರ ಸರ್ಕಾರ, ಸರ್ಕಾರದ ಪ್ರತಿಯೊಂದು ತೀರ್ಮಾನವನ್ನು ಪ್ರಧಾನ ಮಂತ್ರಿ ಕಚೇರಿಯೇ ತೆಗೆದುಕೊಳ್ಳುವುದು. ಪ್ರತಿಯೊಂದು ದಾಖಲೆಗಳು ಕೂಡ ಅನುಮೋದನೆಗೆ ಪ್ರಧಾನ ಮಂತ್ರಿ ಕಚೇರಿಗೆ ಹೋಗಬೇಕು. ಭಾರತದ ಇತಿಹಾಸದಲ್ಲಿಯೇ ಇಂದು ಪ್ರಧಾನ ಮಂತ್ರಿ ಕಚೇರಿ ಕೇಂದ್ರೀಕೃತ ಆಡಳಿತವಿದೆ ಎಂದು ಆರೋಪಿಸಿ ಮುಂದುವರಿದು, ಬಿಳಿ ಕುದುರೆ ಮೇಲೆ ಹೀರೋ ಕುಳಿತು ಖಡ್ಗವನ್ನು ಕೈಯಿಂದ ಎತ್ತರಕ್ಕೆ ತೋರಿಸಿ ನನಗೆಲ್ಲಾ ಗೊತ್ತು ಎಂದು ಹೇಳುವ ವ್ಯಕ್ತಿತ್ವ ಮೋದಿಯವರದ್ದು ಎಂದು ಟೀಕಿಸಿದರು.

ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮಧ್ಯೆ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಮೈತ್ರಿ ಏರ್ಪಡಲಿದೆ. ಆದರೆ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯ ಆಯ್ಕೆ ಸಾಮೂಹಿಕ ನಿರ್ಧಾರವಾಗಿರುತ್ತದೆ. ಅದು ರಾಹುಲ್ ಗಾಂಧಿಯಾಗಿರಲಿಕ್ಕಿಲ್ಲ. ಬಿಜೆಪಿಯಂತೆ ಏಕವ್ಯಕ್ತಿ ಕೇಂದ್ರಿತ ಪಕ್ಷವಲ್ಲ ನಮ್ಮದು, ಕಾಂಗ್ರೆಸ್ ನಾಯಕರು ವಿಶಾಲ ಮನೋಸ್ಥಿತಿಯವರು. ಎರಡನೇ ಬಾರಿಗೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ನ ಉದ್ದೇಶವಾಗಿದೆ. ನಮ್ಮಲ್ಲಿ ಪ್ರಣಬ್ ಮುಖರ್ಜಿ, ಪಿ ಚಿದಂಬರಂ ಮತ್ತು ಇತರ ಕೆಲವು ನಾಯಕರು ಅಗಾಧ ಸಾಧನೆ ಮಾಡಿದವರಿದ್ದಾರೆ ಎಂದು ಕಾಂಗ್ರೆಸ್ ನ್ನು ಹೊಗಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com