ವಾರಾಣಿಸಿ: ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ಕಳೆದ 16 ವರ್ಷಗಳಿಂದ ವಾರಣಾಸಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಪಾಕಿಸ್ತಾನ ಮೂಲದ ವ್ಯಕ್ತಿ ತನ್ನ ದೇಶಕ್ಕೆ ಮರಳುವಾಗಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಕೊಂಡೊಯ್ದಿದ್ದಾನೆ.
16 ವರ್ಷಗಳ ಹಿಂದೆ ವಾರಣಾಸಿಯ ಕಟೋನ್ಮೆಂಟ್ ಪ್ರದೇಶದಲ್ಲಿ ಬಂಧಿತನಾಗಿದ್ದ ಜಲಾಲುದ್ದೀನ್ ಭಾನುವಾರ ಬಿಡುಗಡೆಯಾಗಿದ್ದನು.
ಅನುಮಾನಾಸ್ಪದ ರೀತಿಯಲ್ಲಿ ಸುಳಿದಾಡುತ್ತಿದ್ದ ಹಾಗೂ ಕೆಲವೊಂದು ರಹಸ್ಯ ದಾಖಲೆ ಹೊಂದಿದ್ದ ಆರೋಪದ ಮೇಲೆ ಪಾಕಿಸ್ತಾನದ ಸಿಂಧ್ ಪ್ಯಾಂತ್ಯಕ್ಕೆ ಸೇರಿರುವ ಜಲಾಲುದ್ದೀನ್ ನನ್ನು ಬಂಧಿಸಲಾಗಿತ್ತು ಎಂದು ವಾರಣಾಸಿಯ ಕೇಂದ್ರ ಕಾರಾಗೃಹ ಹಿರಿಯ ಅಧೀಕ್ಷಕ ಅಂಬರೀಶ್ ಗೌಡ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
ಜೈಲು ಶಿಕ್ಷೆ ಮುಗಿಸಿ ತವರಿಗೆ ವಾಪಸಾಗುತ್ತಿರುವ ಜಲಾಲುದ್ದೀನ್, ತನ್ನೊಂದಿಗೆ ಹಿಂದೂಗಳ ಪವಿತ್ರ ಗ್ರಂಥ ಭಗವಗ್ದೀತೆಯನ್ನು ಕೊಂಡೊಯ್ದಿರುವುದನ್ನು ಅಂಬರೀಶ್ ಖಚಿತಪಡಿಸಿದ್ದಾರೆ.