ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕ್ ಉದ್ಧಟತನ, ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಯೋಧ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ಶನಿವಾರ ನಡೆದಿದೆ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ಶನಿವಾರ ನಡೆದಿದೆ. '
ರಜೌರಿ ಜಿಲ್ಲೆಯ ಸುಂಬರ್ ಬನಿ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಗಸ್ತು ತಿರುಗುತ್ತಿತ್ತು. ಈ ವೇಳೆ ಪಾಕಿಸ್ತಾನ ಸೇನೆ, ಯೋಧರನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಬಂಕರ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ವರುಣ್ ಕಟ್ಟಲ್ ಅವರ ಮೇಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. ಗಾಯಗೊಂಡಿದ್ದ ಯೋಧನನ್ನು ಕೂಡಲೇ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ.
ಯೋಧನ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಜಮ್ಮುವಿನ ರಕ್ಷಣಾ ವಕ್ತಾರ ಲೆ.ಕ.ದೇವೇಂದ್ರ ಆನಂದ್ ಅವರು ಹೇಳಿದ್ದಾರೆ.