ರಫೇಲ್‌ ಒಪ್ಪಂದದ ಬಗ್ಗೆ ರಾಹುಲ್‌ ಗಾಂಧಿ ಆರೋಪಗಳೆಲ್ಲ ಸುಳ್ಳು: ಡಸಾಲ್ಟ್ ಸಿಇಓ

ರಫೇಲ್‌ ಒಪ್ಪಂದದಲ್ಲಿ ಬೇರೊಬ್ಬರ ಹಸ್ತಕ್ಷೇಪವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ರಫೇಲ್‌ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಫೇಲ್‌ ಒಪ್ಪಂದಕ್ಕಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಆಯ್ಕೆ ನಾವು ಮಾಡಿದ್ದೇ ಹೊರತು, ಇದರಲ್ಲಿ ಬೇರೊಬ್ಬರ ಹಸ್ತಕ್ಷೇಪವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ರಫೇಲ್‌ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ಹೇಳಿದ್ದಾರೆ.
ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಎರಿಕ್‌ ಟ್ರ್ಯಾಪಿಯರ್‌, 'ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.  
'ನಾನೇನೂ ಸುಳ್ಳು ಹೇಳುತ್ತಿಲ್ಲ, ರಾಹುಲ್‌ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ. ರಫೇಲ್‌ ಡೀಲ್‌ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ. ಸುಳ್ಳು ಹೇಳುವ ಅಗತ್ಯತೆ ನನಗಂತೂ ಇಲ್ಲ. ನನ್ನ ಸಿಇಓ ಹುದ್ದೆಯಲ್ಲಿ ನೀವಿದ್ದರೆ ನೀವೂ ಸುಳ್ಳು ಹೇಳಲಾರಿರಿ ಎಂದು ಟ್ರ್ಯಾಪಿಯರ್ ಹೇಳಿದ್ದಾರೆ.
ಅಂತೆಯೇ ತಮ್ಮ ಫ್ರೆಂಚ್‌ ಕಂಪೆನಿ ಮತ್ತು ಕಾಂಗ್ರೆಸ್‌ ಪಕ್ಷದೊಂದಿಗೆ ಹಳೆಯ ಸಂಬಂಧಗಳನ್ನು ನೆನಪಿಸಿಕೊಂಡ ಟ್ರ್ಯಾಪಿಯರ್‌, 'ನಮ್ಮ ಕಂಪೆನಿ ಭಾರತದೊಂದಿಗೆ ಮೊದಲ ಡೀಲ್‌ ಮಾಡಿಕೊಂಡದ್ದು 1953ರಲ್ಲಿ.. ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ರವರ ಆಡಳಿತಾವಧಿಯಲ್ಲಿ' ಎಂದು ಹೇಳಿದರು.  ಡಸಾಲ್ಟ್ ಕಂಪೆನಿಯ ಭಾರತೀಯ ಆಫ್ಸಟ್‌ ಭಾಗೀದಾರ ಕಂಪೆನಿಯಾಗಿ ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಯನ್ನು ಆಯ್ಕೆ ಮಾಡಲಾಗಿರುವ ಬಗ್ಗೆ ಮಾತನಾಡಿದ ಟ್ರ್ಯಾಪಿಯರ್‌, 'ಈ ಡೀಲ್‌ನಲ್ಲಿ ಹೂಡಲ್ಪಟ್ಟಿರುವ ಹಣವು ರಿಲಯನ್ಸ್‌ ಕಂಪೆನಿಗೆ ನೇರವಾಗಿ ಹೋಗುವುದಿಲ್ಲ. ಇದೊಂದು ಜಂಟಿ ಉದ್ಯಮವಾಗಿದ್ದು, ಒಪ್ಪಂದದ ಅನ್ವಯ ಈ ಕಾರ್ಯಕ್ಕಾಗಿ ರಿಲಯನ್ಸ್ ನಂತೆಯೇ ಇನ್ನೂ 30 ಸಂಸ್ಥೆಗಳು ಕೈಜೋಡಿಸಿವೆ' ಎಂದು ಸ್ಪಷ್ಟಪಡಿಸಿದರು. 
'ತಮ್ಮ ವಿರುದ್ಧ ಹಾಗೂ ತಮ್ಮ ಕಂಪನಿ ವಿರುದ್ಧ ಕಾಂಗ್ರೆಸ್ ಮಾಡಿದ ಆರೋಪದಿಂದ ಬಹಳ ನೋವಾಗಿದೆ. ನಮಗೆ ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘವಾಗಿ ವ್ಯವಹರಿಸಿದ ಅನುಭವವಿದೆ. ನಮ್ಮ ಮೊದಲ ವ್ಯವಹಾರ 1953ರಲ್ಲಿ ನೆಹರೂ ಪ್ರಧಾನಿಯಾಗಿದ್ದಾಗಲೇ ಆರಂಭವಾಯಿತು. ನಂತರದ ಪ್ರಧಾನಿಗಳ ಅವಧಿಯಲ್ಲೂ ಅದು ಮುಂದುವರಿದಿದೆ. ನಾವು ಭಾರತದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಯಾವುದೇ ಪಕ್ಷಕ್ಕೆ ಕೆಲಸ ಮಾಡುತ್ತಿಲ್ಲ. ಭಾರತೀಯ ವಾಯುಪಡೆಗೆ ಮತ್ತು ಭಾರತ ಸರಕಾರಕ್ಕೆ ಅಗತ್ಯವಿರುವ ರಕ್ಷಣಾ ಉತ್ಪನ್ನಗಳನ್ನು ನಾವು ಒದಗಿಸುತ್ತಿದ್ದೇವೆ. ಇದುವೇ ಅತ್ಯಂತ ಮುಖ್ಯವಾದದ್ದು ಎಂದು ಟ್ರ್ಯಾಪಿಯರ್ ಹೇಳಿದರು.
ಬರೆದುಕೊಟ್ಟಂತೆ ಉತ್ತರ ನೀಡಿದ ಟ್ರ್ಯಾಪಿಯರ್: ಕಾಂಗ್ರೆಸ್ ಕಿಡಿ
ಇನ್ನು ಡಸ್ಸಾಲ್ಟ್ ಏವಿಯೇಷನ್ ಸಿಇಒ ಸಂದರ್ಶನದ ಹೇಳಿಕೆ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷ, ಎರಿಕ್ ತಮ್ಮ ಸಂದರ್ಶನದಲ್ಲಿ ಯಾರೋ ಬರೆದುಕೊಟ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದೆನಿಸುತ್ತಿದೆ ಎಂದು ಹೇಳಿದೆ. ಅಂತೆಯೇ ಎರಿಕ್ ಸುಳ್ಳು ಹೇಳಿ ತೇಪೆ ಹಾಕಬಹುದು. ಆದರೆ ಈ ಹಗರಣವನ್ನು ಮುಚ್ಚಿಹಾಕಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com