ನವದೆಹಲಿ: ಇತ್ತೀಚಿಗೆ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಏರ್ ಇಂಡಿಯಾ ವಿಮಾನದ ಹಿರಿಯ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಅವರನ್ನು ನಿರ್ದೇಶಕ(ಕಾರ್ಯಾಚರಣೆ) ಹುದ್ದೆಯಿಂದ ವಜಾಗೊಳಿಸಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಅರವಿಂದ್ ಕಠ್ಪಲಿಯಾ ಅವರನ್ನು ನಿರ್ದೇಶಕ(ಕಾರ್ಯಾಚರಣೆ) ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಇಡಿ(ತರಬೇತಿ) ಕ್ಯಾಪ್ಟನ್ ಅಮಿತಾಭ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ನಿರ್ದೇಶಕ(ಕಾರ್ಯಾಚರಣೆ) ಹೊಣೆ ವಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಆಲ್ಕೊಹಾಲ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಕಠ್ಪಲಿಯಾ ಅವರ ಹಾರಾಟ ಪರವಾನಿಗೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಕಳೆದ ಭಾನುವಾರ ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ಸುಮಾರು ಆರು ಗಂಟೆ ತಡವಾಗಿ ಟೇಕ್ ಆಫ್ ಆಗಿತ್ತು.
ಕ್ಯಾಪ್ಟನ್ ಅರವಿಂದ್ ಅವರು ಈ ಹಿಂದೆಯೂ 2017, ಜನವರಿ 19ರಂದು ಕುಡಿದು ಬಂದು ಸಿಕ್ಕಿಬಿದ್ದಿದ್ದರು. ಈ ಕುರಿತು ಅವರ ವಿರುದ್ಧ ಭಾರತೀಯ ಪೈಲಟ್ಸ್ ಸಂಘ ದೂರು ದಾಖಲಿಸಿತ್ತು.