'ಗಜ' ಅಬ್ಬರಕ್ಕೆ ತಮಿಳುನಾಡಿನಲ್ಲಿ 13 ಮಂದಿ ಬಲಿ, 81 ಸಾವಿರ ಜನರ ಸ್ಥಳಾಂತರ

ತಮಿಳುನಾಡಿನಲ್ಲಿ 'ಗಜ' ಚಂಡಮಾರುತದ ಅಬ್ಬರಕ್ಕೆ ಶುಕ್ರವಾರ 13 ಮಂದಿ ಬಲಿಯಾಗಿದ್ದು, 81 ಸಾವಿರ ಜನರನ್ನು ಪರಿಹಾರ ಕೇಂದ್ರಗಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡಿನಲ್ಲಿ 'ಗಜ' ಚಂಡಮಾರುತದ ಅಬ್ಬರಕ್ಕೆ ಶುಕ್ರವಾರ 13 ಮಂದಿ ಬಲಿಯಾಗಿದ್ದು, 81 ಸಾವಿರ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇಂದು ಬೆಳಗಿನ ಜಾವವೇ ತಮಿಳುನಾಡಿನ ನಾಗಪಟ್ಟಣಂ ಹಾಗೂ ವೇದಅರಣ್ಯಂ ತಲುಪಿದ 'ಗಜ'ದ ಅಬ್ಬರಕ್ಕೆ ಜನತೆ ನಲುಗಿ ಹೋಗಿದ್ದಾರೆ. ಚಂಡಮಾರುತದಿಂದಾಗಿ ಇದುವರೆಗೆ 10 ಪುರುಷರು ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ. 
ಗಜ ಚಂಡಮಾರುತ ಪರಿಣಾಮ ನಾಗಪಟ್ಟಿಣಂ, ತಿರುವಾರೂರು ಮತ್ತು ತಂಜಾವೂರು ಜಿಲ್ಲೆಗಳ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಮನೆಗಳು ಕುಸಿದು ಹಾನಿಗೀಡಾಗಿವೆ, ವಿದ್ಯುತ್ ಸಂಪರ್ಕ ಕಡಿತವಾಗಿದೆ.
ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ನಿಭಾಯಿಸುತ್ತಿದೆ. ಈ ಸಮಯ ನಮಗೆ ಸವಾಲಾಗಿದೆ ಎಂದು ಕಂದಾಯ ಸಚಿವ ಆರ್ ಬಿ ಉದಯ್ ಕುಮಾರ್ ತಿಳಿಸಿದ್ದಾರೆ.
ಇನ್ನು, ತಮಿಳುನಾಡು ವಿಪತ್ತು ನಿರ್ವಹಣಾ ಮಂಡಳಿಯ ಕಾರ್ಯವನ್ನು ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಶ್ಲಾಘಿಸಿದ್ದಾರೆ. ಸೈಕ್ಲೋನ್‌ ಗಜ ರಾಜ್ಯಕ್ಕೆ ಪ್ರವೇಶ ಮಾಡುವ ಮುನ್ನವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಕ್ಕೆ ಶ್ಲಾಘನೆ ಮಾಡಿದ್ದಾರೆ. ಅಲ್ಲದೆ, ಚಂಡಮಾರುತದಿಂದ ತೊಂದರೆಗೊಳಗಾಗಿರುವ ಜನತೆಗೆ ನೆರವಾಗಲು ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com