ಬದಲಾದ 'ಸುಪ್ರೀಂ' ನಿಲುವು, ಇಂದು ಸಂಜೆಯೇ ಅಲೋಕ್ ವರ್ಮಾ ಅರ್ಜಿ ವಿಚಾರಣೆ!

ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರ ಅರ್ಜಿಯ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ್ದ ಕೋರ್ಟ್ ಇದೀಗ ದಿಢೀರ್ ತನ್ನ ನಿಲುವು ಬದಲಿಸಿ ಇಂದು ಸಂಜೆಯೇ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅವರಣದಲ್ಲಿ ಇಂದು ಕೆಲ ಕುತೂಹಲಕಾರಿ ಘಟನೆಗಳು ನಡೆದಿದ್ದು, ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರ ಅರ್ಜಿಯ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ್ದ ಕೋರ್ಟ್ ಇದೀಗ ದಿಢೀರ್ ತನ್ನ ನಿಲುವು ಬದಲಿಸಿ ಇಂದು ಸಂಜೆಯೇ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಕೇಂದ್ರ ಸರ್ಕಾರ ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕ್ರಮವನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರ ಮೂಲಕ ತಮ್ಮ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತ್ತು.
ಸಿಜೆಐ ರಂಜನ್ ಗಗೋಯ್, ನ್ಯಾ. ಎಸ್ ಕೆ ಕೌಲ್ ಮತ್ತು ಕೆ.ಎಂ ಜೋಸೆಫ್ ಅವರ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಇಂದು ಬೆಳಗಿನ ವಿಚಾರಣೆ ವೇಳೆ ಅಲೋಕ್ ವರ್ಮಾ ಅವರ ಗೌಪ್ಯ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ ನೀವೂ ಯಾರೂ ಕೂಡ ವಿಚಾರಣೆ ಆಲಿಸಲು ಅರ್ಹರಲ್ಲ ಎಂದು ಹೇಳುವ ಮೂಲಕ ಹೇಳಿಕೆ ಸೋರಿಕೆಯನ್ನು ತೀವ್ರವಾಗಿ ಖಂಡಿಸಿತ್ತು.
ಇದೇ ವೇಳೆ ಅಲೋಕ್ ವರ್ಮಾ ಪರ ವಕೀಲ ನಾರಿಮನ್ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದರು. ಈ ವೇಳೆ ಆರಂಭದಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದ ನ್ಯಾಯಪೀಠ ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿ ಇಂದಿನ ಕೋರ್ಟ್ ಕಲಾಪ ಅವಧಿ ಮುಕ್ತಾಯದ ಬಳಿಕ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ವೇಳೆ ವಕೀಲ ನಾರಿಮನ್ ರನ್ನು ಉದ್ದೇಶಿಸಿದ ನ್ಯಾಯಪೀಠ, ನಾರಿಮನ್ ಅವರೇ ಇದು ನಿಮಗಾಗಿ ಮಾತ್ರ. ನಿಮ್ಮ ಹಿರಿತನಕ್ಕೆ ಕೋರ್ಟ್ ಗೌರವ ನೀಡುತ್ತದೆ ಮತ್ತು ಕೋರ್ಟ್ ಅತ್ಯಂತ ಗೌರವಿಸುವ ಕೌನ್ಸಿಲ್ ಸದಸ್ಯರು ನೀವು. ಹೀಗಾಗಿ ನಿಮಗಾಗಿ ಕೋರ್ಟ್ ಕಲಾಪದ ಅವಧಿ ಮುಕ್ತಾಯದ ಬಳಿಕ ಅರ್ಜಿಯ ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ಅಂತೆಯೇ ಅಲೋಕ್ ವರ್ಮಾ ಅವರ ಹೇಳಿಕೆ ಸೋರಿಕೆ ಕುರಿತು ನ್ಯಾಯಾಲಯಕ್ಕೆ ನೆರವು ನೀಡುವಂತೆ ಪೀಠ ನಾರಿಮನ್ ರಲ್ಲಿ ಮನವಿ ಮಾಡಿತು. ಈ ವೇಳೆ ಪತ್ರಿಕಾ ಸುದ್ದಿ ಅವಲೋಕಿಸಿದ ನಾರಿಮನ್ ಅವರು, ಮಾಧ್ಯಮವರದಿ ಸಂಪೂರ್ಣ ಅನಧಿಕೃತವಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಪೀಠ ವರದಿ ಬಿತ್ತರಿಸಿದ ನ್ಯೂಸ್ ಪೋರ್ಟಲ್ ಗೆ ಸಮನ್ಸ್ ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com