ಅನಂತನಾಗ್ ಎನ್ ಕೌಂಟರ್: ಪತ್ರಕರ್ತ ಶುಜಾತ್ ಬುಖಾರಿ ಕೊಂದಿದ್ದ ಉಗ್ರ ಅಜಾದ್ ಮಲ್ಲಿಕ್ ಸಾವು!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಮೃತರಾದ 6 ಮಂದಿಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಮೃತರಾದ 6 ಮಂದಿಯ ಉಗ್ರರ ಗುರುತು ಪತ್ತೆ ಮಾಡಲಾಗಿದ್ದು, ಈ 6 ಮಂದಿಯ ಪೈಕಿ ಓರ್ವ ಉಗ್ರ ಪತ್ರಕರ್ತ ಶುಜಾತ್ ಬುಖಾರಿ ಕೊಂದಿದ್ದವನೆಂದು ತಿಳಿದುಬಂದಿದೆ.
ಈ ಹಿಂದೆ ಇಡೀ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಕಾಶ್ಮೀರ ಮೂಲದ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರೆದಿರುವಂತೆಯೇ ಇತ್ತ ಭಾರತೀಯ ಸೇನೆ ಬುಖಾರಿ ಹತ್ಯೆ ಮಾಡಿದ್ದ ಉಗ್ರ ಅಜಾದ್ ಮಲ್ಲಿಕ್ ಎಂಬಾತನನ್ನು ಹತ್ಯೆ ಗೈದಿದೆ.
ಇಂದು ಬೆಳಗ್ಗೆ ಅನಂತ್ ನಾಗ್ ಜಿಲ್ಲೆಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, ಜಿಲ್ಲೆಯ ಬಿಜ್ ಬೆಹರಾ ಪ್ರಾಂತ್ಯದ ಸೆಕಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ದಿಢೀರ್ ದಾಳಿ ನಡೆಸಿತ್ತು. ಈ ವೇಳೆ ಕನಿಷ್ಠ 6 ಉಗ್ರರು ಸಾವಿಗೀಡಾಗಿದ್ದರು. ಇದೀಗ ಉಗ್ರರ ಕುರಿತು ಮಾಹಿತಿ ಕಲೆ ಹಾಕಿರುವ ಸೇನಾಧಿಕಾರಿಗಳು ಮೃತ 6 ಉಗ್ರರೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮೃತ ಉಗ್ರರನ್ನು ಅಜಾದ್ ಮಲಿಕ್, ಯುನೈಸ್ ಶಾಫಿ, ಶಾಹಿದ್ ಬಶೀರ್, ಬಸಿತ್ ಇಷ್ತಿಯಾಕ್, ಅಕಿಬ್ ನಜರ್ ಮತ್ತು ಫಿರ್ದೌಸ್ ನಜರ್ ಎಂದು ಗುರುತಿಸಲಾಗಿದೆ. ಈ ಪೈಕಿ ಉಗ್ರ ಅಜಾದ್ ಮಲಿಕ್ ಅಲಿಯಾಸ್ ಅಜಾದ್ ದಾದಾ ಎಂಬಾತನು ಕಾಶ್ಮೀರ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
ಬುಖಾರಿ ರೈಸಿಂಗ್ ಕಾಶ್ಮೀರ್ ಎಂಬ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿದ್ದು, ಕಳೆದ ಜೂನ್ 14ರಂದು ಶ್ರೀನಗರದಲ್ಲಿರುವ ಅವರ ಕಚೇರಿಗೆ ತನ್ನ ಇತರೆ ಮೂವರು ಉಗ್ರರೊಂದಿಗೆ ನುಗ್ಗಿದ್ದ ಉಗ್ರ ಅಜಾದ್ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದ. ಅಲ್ಲದೆ ಈ ವೇಳೆ ಅವರ ಇಬ್ಬರು ಭದ್ರತಾ ಸಿಬ್ಬಂದಿಗಳನ್ನೂ ಕೂಡ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಬಳಿಕ ಉಗ್ರರು ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದರು. ಅಂದು ತನಿಖೆ ನಡೆಸಿದ್ದ ಪೊಲೀಸರು ಈ ಸಂಬಂಧ ನಾಲ್ಕು ಉಗ್ರರ ಹೆಸರು ಬಿಡುಗಡೆ ಮಾಡಿದ್ದರು. ಈ ಪೈಕಿ ಉಗ್ರ ಅಜಾದ್ ಮಲ್ಲಿಕ್ ಪ್ರಮುಖ ಆರೋಪಿಯಾಗಿದ್ದು, ಉಳಿದಂತೆ ಮುಜಾಫರ್ ಅಹ್ಮದ್, ನವೀದ್ ಜತ್ ಮತ್ತು ಸಜದ್ ಗುಲ್ ಎಂಬುವವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com