ಮೋದಿ ಸರ್ಕಾರದಿಂದ 'ವರ್ಗಾವಣೆ ಭೀತಿ' ಇದೆ: ಕಾಶ್ಮೀರ ರಾಜ್ಯಪಾಲ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜಿಸುವ ಮುನ್ನ ಪೀಪಲ್ಸ್‌ ಕಾನ್ಫರೆನ್ಸ್‌ ಮುಖಂಡ ಸಜ್ಜದ್‌ ಲೋನ್ ಗೆ ಸರ್ಕಾರ ರಚನೆಗೆ
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜಿಸುವ ಮುನ್ನ ಪೀಪಲ್ಸ್‌ ಕಾನ್ಫರೆನ್ಸ್‌ ಮುಖಂಡ ಸಜ್ಜದ್‌ ಲೋನ್ ಗೆ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂಬ ಕೇಂದ್ರದ ಸೂಚನೆಯನ್ನು ತಿರಸ್ಕರಿಸಿದ ನಂತರ ತಾವು ವರ್ಗಾವಣೆ ಭೀತಿ ಎದುರಿಸುತ್ತಿರುವುದಾಗಿ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಕಣಿವೆ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಮಲಿಕ್ ಅವರು, ನಾನು ಕೆಲಸ ಕಳೆದುಕೊಳ್ಳುವುದಿಲ್ಲ. ಆದರೆ ಯಾವುದೇ ಕ್ಷಣದಲ್ಲೂ ನನ್ನನ್ನು ಶ್ರೀನಗರಿಂದ ಎತ್ತಂಗಡಿ ಮಾಡಬಹುದು ಎಂದು ಎನ್ ಡಿಟಿವಿಗೆ ತಿಳಿಸಿದ್ದಾರೆ.
ನಾನು ಇಲ್ಲಿ ಎಷ್ಟು ದಿನ ಇರುತ್ತೇನೆ ಎಂಬುದು ನನ್ನ ಕೈಯಲ್ಲಿ ಇಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ನಾನು ವರ್ಗಾವಣೆಯಾಗಬಹುದು ಎಂದು ಮಲಿಕ್ ಹೇಳಿದ್ದಾರೆ.
ಕಳೆದ ವಾರ ಪಿಡಿಪಿ, ಕಾಂಗ್ರೆಸ್ ಹಾಗೂ ಎನ್ ಸಿ ಸೇರಿಕೊಂಡು ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದ ನಂತರ ಮಲಿಕ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರು. ಅಲ್ಲದೆ ನಿನ್ನೆಯಷ್ಟೇ ಲೋನೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿಸಬೇಕೆಂದು ಮೋದಿ ಸರ್ಕಾರ ಬಯಸಿತ್ತು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಮಧ್ಯೆ, ಮಲಿಕ್ ಹೇಳಿಕೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ತಿರಸ್ಕರಿಸಿದ ರಾಜ್ಯಪಾಲರ ಧೈರ್ಯವನ್ನು ಮೆಚ್ಚುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ನ್ಯಾಷನಲ್‌ ಕಾನ್ಫರೆನ್ಸ್‌ನ ಒಮರ್‌ ಅಬ್ದುಲ್ಲಾ ಕೂಡ ರಾಜ್ಯಪಾಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ವಿಸರ್ಜನೆ ಆದೇಶ ಹೊರಡಿಸಿದ್ದಾಗ ಈ ಇಬ್ಬರೂ ರಾಜ್ಯಪಾಲರ ವಿರುದ್ಧ ವಾಗ್ಧಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com