ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ)ಕ್ಕೆ ಕತ್ತರಿ ಹಾಕಿದ ಎನ್ ಡಿಎ ಸರ್ಕಾರದ ಕ್ರಮವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಮರ್ಥಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರಿಯ ಸಾಂಖ್ಯಿಕ ಕಚೇರಿ(ಸಿಎಸ್ ಒ) ಪರಿಷ್ಕೃತ ಜಿಡಿಪಿ ಬಿಡುಗಡೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಚಾಟ ಆರಂಭಿಸಿದ್ದಾರೆ.
ಪರಿಷ್ಕೃತ ಜಿಡಿಪಿ ದರವನ್ನು ಸಮರ್ಥಿಸಿಕೊಂಡಿರುವ ಜೇಟ್ಲಿ, ಸಿಎಸ್ಒ ಅತ್ಯಂತ ವಿಶ್ವಸಾರ್ಹ ಸಂಸ್ಥೆ ಎಂದು ಹೇಳಿದ್ದಾರೆ.
ಅತ್ಯಂತ ವಿಶ್ವಸಾರ್ಹ ಸಂಸ್ಥೆ ಸಿಎಸ್ ಒ ಬಿಡುಗಡೆ ಮಾಡಿರುವ ಜಿಡಿಪಿ ದರದಲ್ಲಿ ಯಾವುದೇ ದೋಷ ಕಾಣುತ್ತಿಲ್ಲ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನಿನ್ನೆ ಸಿಎಸ್ ಒ ಬಿಡುಗಡೆ ಮಾಡಿರುವ 2005-06 ರಿಂದ 2017-18ರವರೆಗಿನ ಪರಿಷ್ಕೃತ ಜಿಡಿಪಿ ದರ ಪಟ್ಟಿಯಲ್ಲಿ ಯುಪಿಎ ಆಡಳಿತದ ಸರಾಸರಿ ಜಿಡಿಪಿ ದರ ಶೇ.6.7 ಇದ್ದರೆ ಎನ್ಡಿಎ ಸರ್ಕಾರದ್ದು ಶೇ. 7.35 ರಷ್ಟಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರ ಕಳ್ಳರ ಸರ್ಕಾರ’ ಎಂದು ಟೀಕಿಸಿದೆ.