ರಾಹುಲ್​ ಹೆಸರಿನ ಮುಂದೆ ಗಾಂಧಿ ಇರದಿದ್ದರೆ, ಅವರು ಜಿಲ್ಲಾಧ್ಯಕ್ಷ ಸಹ ಆಗುತ್ತಿರಲಿಲ್ಲ: ಸಚಿವ ರವಿಶಂಕರ್​ ಪ್ರಸಾದ್

ರಾಹುಲ್​ ಹೆಸರಿನ ಮುಂದೆ ಗಾಂಧಿ ಎಂಬ ಪದ ಇರದೇ ಇದ್ದರೆ ಜಿಲ್ಲಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ರಾಹುಲ್​ ಹೆಸರಿನ ಮುಂದೆ ಗಾಂಧಿ ಎಂಬ ಪದ ಇರದೇ ಇದ್ದರೆ ಜಿಲ್ಲಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್​ ಪಕ್ಷ ವಂಶ ರಾಜಕೀಯ ಹಾಗೂ ಸ್ವಜನಪಕ್ಷಪಾತ ಪಕ್ಷ. ರಾಹುಲ್ ಹೆಸರಿನ​ ಮುಂದೆ ಗಾಂಧಿ ಎಂಬ ಹೆಸರು ಇರದೇ ಹೋಗಿದ್ದರೆ, ಅವರು ಕಾಂಗ್ರೆಸ್​ನ ಜಿಲ್ಲಾಧ್ಯಕ್ಷರು ಕೂಡ ಆಗುತ್ತಿರಲಿಲ್ಲ. ಕಾಂಗ್ರೆಸ್​ ಒಂದು ಹಳೆಯ ಪಕ್ಷ. ಸದ್ಯ ರಾಹುಲ್​ ಗಾಂಧಿ ಅವರು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್​ರಂತಹ ಹಲವು ಪ್ರಮುಖ ವ್ಯಕ್ತಿಗಳಿಂದ ಪಕ್ಷ ಎತ್ತರಕ್ಕೆ ತಲುಪಿದೆ. ಆದರೆ, ಒಂದಂತೂ ಖಚಿತಪಡಿಸುತ್ತೇನೆ. ಒಂದು ವೇಳೆ ರಾಹುಲ್​ ಗಾಂಧಿ ಕುಟುಂಬದಲ್ಲಿ ಹುಟ್ಟಿರದಿದ್ದರೆ, ಅವರು ಕಾಂಗ್ರೆಸ್​ನ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಗಾಂಧಿ ಗೋತ್ರ ಬಹಿರಂಗ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಎಳೆತಂದಿರುವುದರಿಂದ ಬಿಜೆಪಿಯು ಕೂಡ ಇದನ್ನು ಚರ್ಚಿಸುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ರಾಜಸ್ಥಾನದಲ್ಲಿ ರಾಹುಲ್​ ಕೌಲ​ ಬ್ರಾಹ್ಮಣನಾದರೆ, ಗುಜರಾತ್ ಗೆ ಭೇಟಿ ನೀಡಿದಾಗ ಅಲ್ಲಿ ಶಿವಭಕ್ತನಾಗುತ್ತಾರೆ. ಹೌದು, ಎಲ್ಲ ನಾಯಕರಿಗೂ ಅವರವರ ನಂಬಿಕೆಯನ್ನು ಹಿಂಬಾಲಿಸುವ ಸ್ವತಂತ್ರವಿದೆ. ಆದರೆ, ಇಂದಿರಾ ಗಾಂಧಿ, ರಾಜೀವ್​ ಗಾಂಧಿ ಹಾಗೂ ಜವಹರ್ ಲಾಲ್​ ನೆಹರೂ ಈ ರೀತಿ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ? ನಿಜವಾದ ಸಮಸ್ಯೆಗಳ ಬಗ್ಗೆ ತಿಳಿಯದೇ ಮತ್ತು ಅದರ ಬಗ್ಗೆ ಮಾತನಾಡಲು ಸಾಧ್ಯವಾಗದೇ ರಾಹುಲ್​ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ರವಿಶಂಕರ್​ ಪ್ರಸಾದ್ ಟೀಕಿಸಿದರು.
ಕಾಂಗ್ರೆಸ್​ ಪಕ್ಷ ವಂಶ ರಾಜಕೀಯದಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗೆ ಕಾಂಗ್ರೆಸ್​ ನಾಯಕರೊಬ್ಬರು ನಾವು ರಾಹುಲು ಕುಟುಂಬದ ಐದು ತಲೆಮಾರುಗಳ ಬಗ್ಗೆ ತಿಳಿದಿದ್ದೇವೆ. ಆದರೆ, ಮೋದಿ ಬಗ್ಗೆ ಅಲ್ಲ ಎಂಬ ಹೇಳಿಕೆ ಅವರ ನಂಬಿಕೆಯನ್ನು ತೋರಿಸುತ್ತದೆ. ಒಂದು ಸರ್ಕಾರವನ್ನು ಒಂದು ಕುಟುಂಬದಿಂದ ನಡೆಸಬಹುದೇ? ಬಡವರು ಮತ್ತು ನಿರಾಶ್ರಿತರು ಕೂಡ ಸರ್ಕಾರವನ್ನು ಪ್ರವೇಶಿಸಬಹುದಲ್ಲವೇ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com