ಪೋಲಿಯೋ ಲಸಿಕೆಯಲ್ಲೇ ಟೈಪ್-2 ಪೋಲಿಯೋ ವೈರಾಣು ಪತ್ತೆ?

ಮಾರಕ ಪೋಲಿಯೋ ರೋಗ ನಿವಾರಣಗಾಗಿ ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲೇ ಟೈಪ್-2 ಪೋಲಿಯೋ ವೈರಾಣು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಾರಕ ಪೋಲಿಯೋ ರೋಗ ನಿವಾರಣಗಾಗಿ ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲೇ ಟೈಪ್-2 ಪೋಲಿಯೋ ವೈರಾಣು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಪೋಲಿಯೊ ನಿರೋಧಕ ಲಸಿಕೆ ತಯಾರಿಕಾ ಕಂಪನಿಯೊಂದರಲ್ಲಿ ಉತ್ಪಾದನೆಯಾದ ಕನಿಷ್ಠ 1.5 ಲಕ್ಷ ಬಾಟಲಿ ಲಸಿಕೆಗಳಲ್ಲಿ ಟೈಪ್-2 ಪೋಲಿಯೊ ವೈರಸ್ ಪತ್ತೆಯಾಗಿದ್ದು, ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದೆ. 
2016ರ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಟೈಪ್-2 ವೈರಸ್ ನಿರ್ಮೂಲನೆ ಮಾಡಲಾಗಿತ್ತು. ಆ ಮೂಲಕ ಭಾರತ ಪೋಲಿಯೋ ಮುಕ್ತ ದೇಶ ಎಂಬ ಹಣೆಪಟ್ಟಿಗೆ ಒಳಗಾಗಿತ್ತು. ಆದರೆ ಇದೀಗ ಭಾರತದ ಈ ಪೋಲಿಯೋ ಮುಕ್ತ ಭಾರತ ಎಂಬ ಹೆಮ್ಮೆಗೆ ಕುತ್ತು ಬಂದಿದ್ದು, ಭಾರತಕ್ಕೆ ಮತ್ತೆ ಪೋಲಿಯೋ ಭೀತಿ ಎದುರಾಗಿದೆ.
2016ರ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಟೈಪ್-2 ವೈರಸ್ ನಿರ್ಮೂಲನೆ ಮಾಡಲಾಗಿತ್ತು. ಆದ್ದರಿಂದ ಆ ಬಳಿಕ ಹುಟ್ಟಿದ ಮಕ್ಕಳಲ್ಲಿ ಈ ನಿರ್ದಿಷ್ಟ ವೈರಸ್ ಪ್ರತಿರೋಧ ಶಕ್ತಿ ಇಲ್ಲದಿರುವುದರಿಂದ ಭಾರತದಲ್ಲಿ ಪೋಲಿಯೊ ಪೀಡೆ ಮತ್ತೆ ತಲೆದೋರುವ ಭೀತಿ ಎದುರಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. 
ಮೂಲಗಳು ತಿಳಿಸಿರುವಂತೆ ಉತ್ತರ ಪ್ರದೇಶದ ಘಾಜಿಯಾಬಾದ್ ನ ಬಯೊಮೆಡ್ ಘಟಕದಲ್ಲಿ ಉತ್ಪಾದನೆಯಾದ ಲಸಿಕೆಗಳಲ್ಲಿ ಟೈಪ್-2 ಪೋಲಿಯೋ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಈ ಲಸಿಕೆ ವಿತರಣೆಯಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಸಮರೋಪಾದಿಯಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಿವೆ. ಉತ್ಪಾದನೆ ಹಾಗೂ ಪೂರೈಕೆ ಸರಣಿಯಿಂದ ನಿರ್ಮೂಲನೆ ಮಾಡಲಾದ ಟೈಪ್-2 ವೈರಸ್ ಮತ್ತೆ ಹೇಗೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸಲು ಮೂವರು ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದಲ್ಲಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಬಯೋಮೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನನ್ನು ಗುರುವಾರ ಬಂಧಿಸಲಾಗಿದ್ದು, ಕಂಪನಿಯ ನಾಲ್ವರು ನಿರ್ದೇಶಕರು ತಲೆ ಮರೆಸಿಕೊಂಡಿದ್ದಾರೆ. ಲಸಿಕೆ ಉತ್ಪಾದನೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಹಿರಿಯ ವೈದ್ಯಾಧಿಕಾರಿಯೊಬ್ಬರು, 'ಲಸಿಕೆ ಕಲುಷಿತಗೊಂಡಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ನಿರ್ಮೂಲನೆ ಮಾಡಲಾದ ವೈರಸ್ ಸಮುದಾಯವನ್ನು ಪತ್ತೆ ಪರಿಚಯಿಸಿದಂತಾಗಿದೆ. ಆದ್ದರಿಂದ ಮಕ್ಕಳ ಮಲ ಮಾದರಿಯಲ್ಲಿ ಮತ್ತು ಚರಂಡಿ ನೀರಿನಲ್ಲಿ ಸಕ್ರಿಯ ವೈರಸ್ ಗಳ ಇರುವಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ಸಚಿವಾಲಯ ತೀವ್ರ ನಿಗಾ ಇರಿಸಿವೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com