
ನವದೆಹಲಿ: ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸುವ ಅಗತ್ಯವಿದೆ ಎಂದು ಹೇಳಿದೆ.
ಕಳೆದ ವರ್ಷ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟಿಸಿದ್ದ ಪದ್ಮಾವತ್ ಚಿತ್ರ ತೆರೆಗೆ ಬರುವುದಕ್ಕೆ ಮುನ್ನ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಐತಿಹಾಸಿಕ ಚಿತ್ರವಾದ ಪದ್ಮಾವತ್ ನಲ್ಲಿ ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕರ್ಣಿ ಸೇವಾ ಸೇರಿದಂತೆ ರಜಪೂತರ ಗುಂಪು ದೇಶಾದ್ಯಂತ ಪ್ರತಿಭಟನೆ ಮಾಡಿ ಅನೇಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದವು. ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುತ್ತದೆ ಮತ್ತು ಜನರಿಗೆ ತೊಂದರೆಯಾಗುತ್ತದೆ ಎಂದು ವಾದ ಮಂಡಿಸಿ ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎಎಮ್ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್, ಪ್ರತಿಭಟನೆ ವೇಳೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವ ಕೃತ್ಯವನ್ನು ಅತ್ಯಂತ ಖಂಡನೀಯವಾದದ್ದು ಮತ್ತು ಗಂಭೀರವಾದ ವಿಷಯ ಎಂದು ತೀರ್ಮಾನಿಸಿದ್ದರು.
ಪ್ರತಿಭಟನೆ ಹೆಸರಿನಲ್ಲಿ ಯಾವುದೇ ಸಂಘಟನೆ ಅಥವಾ ಗುಂಪು ಇಂತಹ ಕೃತ್ಯವೆಸಗಬಾರದು ಎಂದು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ತೊಂದರೆಯುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಕೂಡ ವಿಫಲರಾಗಿದ್ದಾರೆ ಎಂದು ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಪೊಲೀಸರ ವಿರುದ್ಧ ಹರಿಹಾಯ್ದರು.
ವಿಧ್ವಂಸಕ ಕೃತ್ಯಗಳು ಮತ್ತು ದಂಗೆ ನಡೆಯದಂತೆ ಸಂಬಂಧಪಟ್ಟ ಪ್ರದೇಶದ ಪೊಲೀಸ್ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ವೇಣುಗೋಪಾಲ್ ನ್ಯಾಯಾಲಯಕ್ಕೆ ಹೇಳಿದರು.
ಸುಪ್ರೀಂ ಕೋರ್ಟ್ 2009ರಲ್ಲಿ ತಂದ ತೀರ್ಪನ್ನು ಜಾರಿಗೆ ತಂದು ಮಾರ್ಗಸೂಚಿ ರಚಿಸುವಂತೆ ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ನ್ಯಾಯಾಲಯದ ಮೊರೆ ಹೋಗಿತ್ತು.
ಪ್ರತಿಭಟನೆ ಹೆಸರಿನಲ್ಲಿ ಸಾರ್ಜಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಏನೇ ತೊಂದರೆಯಾದರೂ ಪ್ರತಿಭಟನೆ ಮಾಡುವವರು ಜವಾಬ್ದಾರರಾಗಿರುತ್ತಾರೆ ಎಂದು 2009ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಪ್ರತಿಭಟನೆ ಮಾಡುವಾಗ ಪೊಲೀಸ್ ಅಧಿಕಾರಿಗಳು ಫೋಟೋ ತೆಗೆಯಬೇಕು ಆ ಮೂಲಕ ಸಾಕ್ಷಿ ನೀಡಬಹುದೆಂದು ನ್ಯಾಯಾಲಯ ಹೇಳಿತ್ತು.
Advertisement