ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್ ಧರ್ಮಕ್ಷೇತ್ರದ ಬಿಷಪ್ ಫ್ರಾಂಕೋ ಮುಲಕ್ಕಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ...
ಕೊಟ್ಟಾಯಂ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್ ಧರ್ಮಕ್ಷೇತ್ರದ ಬಿಷಪ್ ಫ್ರಾಂಕೋ ಮುಲಕ್ಕಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯು ಇಂತಹ ಆರೋಪಗಳನ್ನು ಎದುರುಸುತ್ತಿರುವಾಗ ಜಾಮೀನು ನೀಡಿದರೆ, ಅದು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಪೊಲೀಸರು ನ್ಯಾಯಾಲಯದ ಮುಂದೆ ತಿಳಿಸಿದರು.
ಇದರಂತೆ ಪ್ರಕರಣ ಸಂಬಂಧ ಸುದೀರ್ಘ ವಾದ ಹಾಗೂ ಪ್ರತಿವಾದಗಳನ್ನು ಆಲಿಸದ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಅವರು, ಬಿಷಪ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಆರೋಪಿಯ ಬಂಧನದ ಬಳಿಕವೂ ತನಿಖೆ ಪ್ರಗತಿಯಲ್ಲಿದೆ. ಪ್ರಕರಣ ಅಂತಿಮ ಘಟ್ಟದಲ್ಲಿದ್ದು, ಜಾಮೀನು ನೀಡದಂತೆ ಮಾಡಲಾಗಿದ್ದ ಮನವಿಯನ್ನು ನ್ಯಾಯಾಲಯ ಪರಿಗಣಿಸಿದೆ. ಪ್ರಕರಣ ಸಂಬಂಧ ಸನ್ಯಾಸಿನಿ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.