ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಅಯ್ಯಪ್ಪಸ್ವಾಮಿ ದರ್ಶನ ಆರಂಭ, ಮಹಿಳೆಯರಿಗೆ ಸಿಗಲಿಲ್ಲ ಪ್ರವೇಶ

ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ...
ದೇವಸ್ಥಾನದ ಬಳಿ ಭಾರಿ ಭದ್ರತೆ ಒದಗಿಸಿರುವುದು
ದೇವಸ್ಥಾನದ ಬಳಿ ಭಾರಿ ಭದ್ರತೆ ಒದಗಿಸಿರುವುದು
ಶಬರಿಮಲೆ: ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.
ಪ್ರತಿಭಟನೆಯಿಂದಾಗಿ ಶಬರಿಮಲೆಯ ಮಾರ್ಗದುದ್ದಕ್ಕೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನೀಲಕ್ಕಲ್‌ ಗ್ರಾಮ ಅಕ್ಷರಶಃ ರಣಾಂಗಣವಾಗಿ ನಿರ್ಮಾಣಗೊಂಡಿತ್ತು.
ಭಾರಿ ಪ್ರತಿಭಟನೆಯ ನಡುವೆಯೇ ಶಬರಿಮಲೆ ದೇಗುಲ ಮಾಸ ಪೂಜೆಗಾಗಿ ಇಂದು ದ್ವಾರಗಳನ್ನು ತೆರೆದಿದೆ. ಹಲವು ಭಕ್ತರು ದೇಗುಲಕ್ಕೆ ಪ್ರವೇಶ ಪಡೆದು ಅಯ್ಯಪ್ಪನ ದರ್ಶನ ಪಡೆದರು. ಆದರೆ 10 ವರ್ಷ ಕೆಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರನ್ನು ಹೊರತುಪಡಿಸಿದರೆ ಯಾವ ಮಹಿಳೆಯೂ ದೇಗುಲ ಪ್ರವೇಶ ಪಡೆಯಲಿಲ್ಲ,.
ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಕಲ್ಲು ತೂರಾಟ ನಡೆಸಿದರು. 
ಪೊಲೀಸ್‌ ಬೆಂಗಾವಲಿನೊಂದಿಗೆ 10 ನಿಮಿಷದ ದಾರಿ ಸಾಗುತ್ತಿದ್ದಂತೆ ಮಾಧವಿ ಮತ್ತು ಕುಟುಂಬ ಅಯ್ಯಪ್ಪನ ಸನ್ನಿಧಾನಕ್ಕೆ ಯಾತ್ರೆಯನ್ನು ಮೊಟಕುಗೊಳಿಸಿ ವಾಪಸಾದರು. ನಿಲಕ್ಕಲ್‌ ಮತ್ತು ಪಂಪಾದಲ್ಲೇ ಪ್ರತಿಭಟನೆಕಾರರು ಮಾಧವಿ ಅವರನ್ನು ತಡೆದಿದ್ದರು. ಆದರೆ ಪೊಲೀಸರ ನೆರವಿನೊಂದಿಗೆ ಮತ್ತಷ್ಟು ಮೇಲೇರಿದ್ದ ಅವರು ಬಳಿಕ ಹಠಾತ್ತನೆ ಯಾತ್ರೆ ಕೈಬಿಟ್ಟರು.
ಐದು ದಿನಗಳ ತುಲಾ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನಿಳಕ್ಕಲ್ ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.
ಕಳೆದ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ್ದು, ತೀರ್ಪು ಪ್ರಕಟವಾದ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ರಾಜ್ಯಸರ್ಕಾರ ಬದ್ಧವಾಗಿದ್ದು, ದೇಗುಲ ಪ್ರವೇಶ ಮಾಡುವವರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com