ರಾಫೆಲ್ ವಿವಾದ: ಎನ್ ಡಿಟಿವಿ ವಿರುದ್ಧ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ

ಪ್ರಧಾನಿ ಮೋದಿ ಸರ್ಕಾರ ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ ಸುದ್ದಿ ಮಾಧ್ಯಮದ ವಿರುದ್ಧ ಅನಿಲ್ ಅಂಬಾನಿ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ಮೋದಿ ಸರ್ಕಾರ ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ ಸುದ್ದಿ ಮಾಧ್ಯಮದ ವಿರುದ್ಧ ಅನಿಲ್ ಅಂಬಾನಿ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡಿದ ಎನ್ ಡಿಟಿವಿ ವಿರುದ್ಧ ಅನಿಲ್ ಅಂಬಾನಿ ಅವರ ರಿಲಯನ್ಸ್ ಉದ್ಯಮ ಸಮೂಹ ಅಹ್ಮದಾಬಾದ್ ಕೋರ್ಟ್‌ನಲ್ಲಿ ಬರೊಬ್ಬರಿ 10 ಸಾವಿರ ಕೋಟಿ ರೂ. ಪರಿಹಾರ ಆಗ್ರಹಿಸಿ ಮಾನನಷ್ಟ ಮೊಕದ್ದಮೆ ಹೂಡಿದೆ. ಈ ಬಗ್ಗೆ ಸ್ವತಃ ಎನ್ ಡಿಟಿವಿ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದ್ದು, ಸೆಪ್ಟೆಂಬರ್ 29ರಂದು ಎನ್ ಡಿಟಿವಿ ಪ್ರಸಾರ ಮಾಡಿದ 'ಟ್ರೂಥ್ ವರ್ಸಸ್ ಹೈಪ್' ಸಾಪ್ತಾಹಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ದಾವೆ ಹೂಡಲಾಗಿದೆ ಎಂದು ಎನ್ ಡಿಟಿವಿ ಪ್ರಕಟಣೆಯಲ್ಲಿ ಹೇಳಿದೆ. ಈ ಪ್ರಕರಣ ಅಕ್ಟೋಬರ್ 26ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇನ್ನು ಅನಿಲ್ ಅಂಬಾನಿ ಮಾಡಿರುವ ಎಲ್ಲ ಆರೋಪಗಳನ್ನು ಸುದ್ದಿವಾಹಿನಿ ತಳ್ಳಿ ಹಾಕಿದ್ದು, ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ಪ್ರಕಟಿಸಿದೆ.
'ಅನಿಲ್ ಅಂಬಾನಿ ಉದ್ಯಮ ಸಮೂಹದ ಬಲಾಢ್ಯ ಶಕ್ತಿಗಳು ವಾಸ್ತವವನ್ನು ಹತ್ತಿಕ್ಕಲು ಮತ್ತು ಮಾಧ್ಯಮ ತನ್ನ ಕೆಲಸ ಮಾಡದಂತೆ ತಡೆಯುವ ಹುನ್ನಾರ ನಡೆಸಿವೆ. ರಕ್ಷಣಾ ಒಪ್ಪಂದದ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಬಯಸಿರುವುದು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ. ಈ ವಿವಾದದ ಸಂಬಂಧ ತಮ್ಮ ಅಭಿಪ್ರಾಯ ತಿಳಿಸಲು ಹಲವು ಬಾರಿ ರಿಲಯನ್ಸ್ ಉದ್ಯಮ ಸಮೂಹದ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಇದನ್ನು ನಿರ್ಲಕ್ಷಿಸಲಾಗಿತ್ತು. ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಲು ತನ್ನ ಮೇಲೆ ಒತ್ತಡ ಇತ್ತು ಎನ್ನುವುದನ್ನು ಡಸಾಲ್ಟ್ ನಿರಾಕರಿಸಿರುವುದೂ ಸೇರಿದಂತೆ ವಿವಾದದ ಎಲ್ಲ ಆಯಾಮಗಳನ್ನು ಪ್ರಸಾರ ಮಾಡಲಾಗಿತ್ತು' ಎಂದು ಎನ್ ಡಿಟಿವಿ ಸಮರ್ಥಿಸಿಕೊಂಡಿದೆ.
ರಿಲಯನ್ಸ್ ಸಮೂಹ ನೋಟಿಸ್ ನೀಡುವ ವಿನೋದದಲ್ಲಿ ತೊಡಗಿದೆ. ಒಂದು ಸುದ್ದಿ ಕಂಪನಿ ವಿರುದ್ಧ 10 ಸಾವಿರ ಕೋಟಿ ರೂ. ಆಗ್ರಹಿಸಿ, ಗುಜರಾತ್ ನ್ಯಾಯಾಲಯದಲ್ಲಿ ಸುಳ್ಳು ಆರೋಪದ ಮೇಲೆ ದಾವೆ ಹೂಡಲಾಗಿದೆ. ಈ ಸುದ್ದಿಯನ್ನು ಕೇವಲ ಎನ್ ಡಿಟಿವಿ ಮಾತ್ರವಲ್ಲದೇ ಎಲ್ಲ ವಾಹಿನಿಗಳೂ ಪ್ರಸಾರ ಮಾಡಿವೆ ಎಂಬ ಅಂಶವನ್ನು ರಿಲಯನ್ಸ್ ನಿರ್ಲಕ್ಷಿಸಿದೆ, ಇದು ಎಲ್ಲ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಹುನ್ನಾರ ಎಂದು ಹೇಳಿಕೆಯಲ್ಲಿ ಸುದ್ದಿಸಂಸ್ಥೆ ಆಪಾದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com