ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳಾ ಪತ್ರಕರ್ತೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆಂಧ್ರ ಪ್ರದೇಶ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆಯತ್ತ ಪ್ರಯಾಣ ಆರಂಭಿಸಿದ್ದರು. ಆದರೆ ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆಗೆ ಅವರು ಮಣಿದಿದ್ದು, ಶಬರಿಮಲೆಯಿಂದ ವಾಪಸ್ ತೆರಳಲು ನಿರ್ಧರಿಸಿದ್ದಾರೆ.
ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಮಹಿಳೆಯರು ದೇಗುಲದತ್ತ ಹೆಜ್ಜೆ ಹಾಕಿದ್ದಾರೆ. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಶಬರಿಲಮಯೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸತ್ತರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದೇ ಆದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಪ್ರಧಾನ ಅರ್ಚಕರು ಬೆದರಿಕೆ ಹಾಕಿದರು. ಹೀಗಾಗಿ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿದ ಪೊಲೀಸ್ ವರಿಷ್ಠಾಧಿಕಾರಿಗಳು ಪಥನಂತಿಟ್ಟ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಈ ವೇಳೆ ಕಚೇರಿಗೆ ಮಹಿಳಾ ಪತ್ರಕರ್ತೆಯರನ್ನೂ ಕರೆಸಿಕೊಂಡ ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯಲ್ಲಿ ದೇವರ ದರ್ಶನ ಬೇಡ ಎಂದು ಪತ್ರಕರ್ತೆಯರ ಮನವೊಲಿಸಿದ್ದಾರೆ.
ಅಲ್ಲದೆ ಸ್ವತಃ ದೇಗುಲದ ಅಚರ್ಕರೂ ಕೂಡ ಅಯ್ಯಪ್ಪ ಸ್ವಾಮಿ ಭಕ್ತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ದೇಗುಲ ಮುಚ್ಚುವ ಬೆದರಿಕೆ ಹಾಕಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವಂತೆ ಮಾಡಿತ್ತು. ಅಂತಿಮವಾಗಿ ಮಹಿಳಾ ಪತ್ರಕರ್ತೆಯರು ಶಬರಿಮಲೆಯಿಂದ ವಾಪಸ್ ತೆರಳು ನಿರ್ಧರಿಸಿದ್ದಾರೆ.
ದೇವರ ದರ್ಶನಕ್ಕಾಗಿ ಕಣ್ಣೀರು ಹಾಕಿ ಗೋಗರೆದ ಮಹಿಳೆಯರು
ಇನ್ನು ಶಬರಿಮಲೆಗೆ ಮಹಿಳೆಯ ಪ್ರವೇಶ ಮಾಡುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ದಂಡು ಅವರನ್ನು ತಡೆದಿದೆ. ಈ ವೇಳೆ ದೇಗುಲ ಅರ್ಚಕರೂ ಕೂಡ ಮಹಿಳೆಯರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಹಿಳೆಯರು ನಮ್ಮ ಪ್ರಾಣದ ಹಂಗು ತೊರೆದು ಪೊಲೀಸ್ ಭದ್ರತೆಯಲ್ಲಿ ಇಲ್ಲಿಯವರೆಗೂ ಬಂದಿದ್ದೇವೆ. ದಯವಿಟ್ಟೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಿ ಎಂದು ಕಣ್ಣೀರು ಹಾಕಿ ಗೋಗರೆದಿದ್ದಾರೆ. ಆದರೆ ಮಹಿಳಾ ಕಾರ್ಯಕರ್ತರಿಗೆ ಮಣಿಯಜದ ಅರ್ಚಕರು ಸಂಪ್ರದಾಯ ಮೀರಲು ಸಾಧ್ಯವೇ ಇಲ್ಲ. ನೀವು ಇಲ್ಲಿಂದ ವಾಪಸ್ ಹೋಗದಿದ್ದರೆ ದೇಗುಲವನ್ನು ಮುಚ್ಚಿ ಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಮಹಿಳೆಯರು ಅನಿವಾರ್ಯವಾಗಿ ಅಲ್ಲಿಂದ ವಾಪಸ್ ಆಗಿದ್ದಾರೆ.