ವಿದೇಶದಲ್ಲಿ ಆಸ್ತಿ ಹೊಂದಿರುವ ಕಾಳಧನಿಕರ ಮೇಲೆ ತೆರಿಗೆ ಇಲಾಖೆ ಕೆಂಗಣ್ಣು, ದೊಡ್ಡ ಪ್ರಮಾಣದ ಕಾರ್ಯಾಚರಣೆ!

ವಿದೇಶಗಳಲ್ಲಿ ಆಸ್ತಿ ಹೊಂದಿರುವ ಕಾಳಧನಿಕರ ಮೇಲೆ ತೆರಿಗೆ ಇಲಾಖೆ ಕೆಂಗಣ್ಣು ಬೀರಿದ್ದು, ಅವರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ರೂಪಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿದೇಶಗಳಲ್ಲಿ ಆಸ್ತಿ ಹೊಂದಿರುವ ಕಾಳಧನಿಕರ ಮೇಲೆ ತೆರಿಗೆ ಇಲಾಖೆ ಕೆಂಗಣ್ಣು ಬೀರಿದ್ದು, ಅವರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ರೂಪಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತ: ಕೇಂದ್ರೀಯ ನೆರ ತೆರಿಗೆಗಳ ವಿಭಾಗ (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಚೇರ್ಮನ್ ಸುಶೀಲ್ ಚಂದ್ರ ಅವರು ಮಾಹಿತಿ ನೀಡಿದ್ದು, ದೊಡ್ಡ ಮಟ್ಟದ ವಿದೇಶಿ ಬ್ಯಾಂಕ್ ವಹಿವಾಟು ಹೊಂದಿರುವವರ ಮೇಲೆ ಇಲಾಖೆ ಕಣ್ಣಿಟ್ಟಿದ್ದು, ಅಕ್ರಮಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ ತಮ್ಮ ಕಾರ್ಯಾಚರಣೆ ಕುರಿತು ವಿವರ ನೀಡಲು ಅವರು ನಿರಾಕರಿಸಿದರು. ಇದಕ್ಕಾಗಿ ತಮ್ಮ ಇಲಾಖೆ ವಿದೇಶಾಂಗ ಇಲಾಖೆ, ವಿತ್ತ ಸಚಿವಾಲಯ ಮತ್ತು ಇತರೆ ಅಗತ್ಯ ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾರ್ಯ ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಈ ಸಂಬಂಧ ವಿತ್ತ ಗುಪ್ತಚರ ವಿಭಾಗ ಕೂಡ ಕಾರ್ಯಾಚರಣೆಯಲ್ಲಿ ತೊಡಗಿದ್ದು ವಿದೇಶಗಳಲ್ಲಿ ಅನುಮಾನಾಸ್ಪದವಾಗಿ ವಹಿವಾಟು ನಡೆಸುತ್ತಿರುವ ಬ್ಯಾಂಕ್ ಖಾತೆಗಳು, ಸಂಸ್ಥೆಗಳ ಮತ್ತು ವ್ಯಕ್ತಿಗಳ ಮೇಲೆ ಕಣ್ಣಿರಿಸಿದೆ. ಈ ಪೈಕಿ ಈಗಾಗಲೇ ಅನುಮಾನಾಸ್ಪದ ವಹಿವಾಟು ನಡೆಸಿದ ವ್ಯಕ್ತಿ, ಖಾತೆ, ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದ್ದು, ಈ ಸಂಬಂಧ ದಾಖಲೆಗಳನ್ನೂ ಕೂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೊಸ ಕಾನೂನಿನ ಮೂಲಕ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವ ಸಂಬಂಧ 2015ರ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಬಹುಕೋಟಿ ಸಾಲ ಮಾಡಿ ವಂಚನೆ ಮಾಡಿದ್ದ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ, ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ದೇಶ ತೊರೆದಿದ್ದು, ವಿದೇಶದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಹೊಂದಿರುವುದನ್ನು ಇಲ್ಲಿ ಸ್ನರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com