
ನವದೆಹಲಿ:ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದಲ್ಲಿ ಫೇಸ್ ಬುಕ್, ಗೂಗಲ್, ಟ್ವಿಟರ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೊಂದಿಗೆ ಇಂದು ಸಭೆ ನಡೆಸಲಾಯಿತು.
ದುರುದ್ದೇಶ ಪೂರಿತ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಸಾರ್ವಜನಿಕರು ವೀಕ್ಷಿಸದಂತೆ ವೆಬ್ ಸೈಟ್ ನಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಪರ ಪಾಲ್ಗೊಂಡಿದ್ದ ಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ದೇಶದ ಭದ್ರತೆಗೆ ಹಾನಿಯಾಗುವಂತಹ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ತಿಳಿಸಿದರು.
ನಿಗದಿತ ಸಮಯದಲ್ಲಿ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಲು ಹಾಗೂ ತನಿಖೆ ಸಂದರ್ಭದಲ್ಲಿ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡಲು ಭಾರತ ಮೂಲಕ ಕುಂದು ಕೊರತೆಗಳ ನಿವಾರಣಾಧಿಕಾರಿಗಳನ್ನು ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳೇ ನೇಮಿಸುವಂತೆ ಅವರು ಹೇಳಿದರು.
ಈ ಸಂಬಂಧ ಎಲ್ಲಾ ರೀತಿಯ ನೆರವು ನೀಡುವುದಾಗಿ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳು ಸರ್ಕಾರಕ್ಕೆ ಭರವಸೆ ನೀಡಿದರು.
ಈ ಹಿಂದೆ ಜೂನ್ 28 ರಂದು, ಕೇಂದ್ರ ಗೃಹ ಕಾರ್ಯದರ್ಶಿ ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಪರಾಮರ್ಶನಾ ಸಭೆ ನಡೆಸಿದ್ದರು.
Advertisement