2014ರ ನಂತರ ಎಷ್ಟು ಸಾಲ ನೀಡಲಾಗಿದೆ?: ಮೋದಿ ‘ಫೋನ್‌ ಲೋನ್‌’ ಹೇಳಿಕೆಗೆ ಚಿದಂಬರಂ ತಿರುಗೇಟು

2014ರ ನಂತರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸಾಲ ನೀಡಲಾಗಿದೆ? ಎಂದು...
ಪಿ ಚಿದಂಬರಂ
ಪಿ ಚಿದಂಬರಂ
ನವದೆಹಲಿ: 2014ರ ನಂತರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸಾಲ ನೀಡಲಾಗಿದೆ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ಮೋದಿ ಅವರ ‘ಫೋನ್‌ ಲೋನ್‌’ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಫೋನ್ ಲೋನ್ ಹೇಳಿಕೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಎನ್ ಡಿಎ ಅವಧಿಯಲ್ಲಿ ಸರ್ಕಾರ ನೀಡಿರುವ ಸಾಲಗಳ ಕುರಿತು ಅಂಕಿ ಅಂಶಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದಾರೆ.
ಹಿಂದಿನ ಸರ್ಕಾರವು ನೀಡಿರುವ ಕೆಟ್ಟ ಸಾಲಗಳನ್ನು ಈಗಿನ ಸರ್ಕಾರ ಏಕೆ ಮರುಪಡೆಯಲಿಲ್ಲ. ಎನ್ ಡಿಎ ಅವಧಿಯಲ್ಲಿ ಎಷ್ಟು ಸಾಲ ನೀಡಲಾಗಿದೆ ಮತ್ತು ಅವುಗಳಲ್ಲಿ ಮರು ಪಾವತಿಸಿಕೊಳ್ಳಲಾಗಿದೆಯೇ ಎಂದು ಚಿದಂಬರಂ ಅವರು ಪ್ರಶ್ನಿಸಿದ್ದಾರೆ.
ಮೇ 2014 ರ ನಂತರ ಎಷ್ಟು ಸಾಲವನ್ನು ನೀಡಲಾಗಿದೆ ಮತ್ತು ಎಷ್ಟನ್ನು ಮರುಪಾವತಿಸಿಕೊಳ್ಳಲಾಗಿದೆ? ಈ ಕುರಿತಾಗಿ ಸಂಸತ್ತಿನಲ್ಲೂ ಕೂಡ ಪ್ರಶ್ನೆಗಳನ್ನು ಕೇಳಲಾಗಿದ್ದರೂ ಉತ್ತರ ಮಾತ್ರ ದೊರೆತಿಲ್ಲ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ಭಾರತೀಯ ಅಂಚೆಯ ಪಾವತಿ ಬ್ಯಾಂಕ್‌ ಸೇವೆ(ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌- ಐಪಿಪಿಬಿ)ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಒಂದು ನಿರ್ಧಿಷ್ಟ ಕುಟುಂಬದ ಫೋನ್ ಕರೆ ಮೇರಗೆ ಸಾಲ ನೀಡಲಾಗಿದೆ ಎಂದು ನೇರವಾಗಿ ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪಿಸಿದೆ ಪ್ರಧಾನಿ ಮೋದಿ ಆರೋಪಿಸಿದ್ದರು.
ಕೆಟ್ಟ ಸಾಲಗಳಿಗೆ ಯುಪಿಎ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದ ಪ್ರಧಾನಿ, ಯುಪಿಎ ಅವಧಿಯಲ್ಲಿ ಒಂದು ಬಗೆಯ 'ಫೋನ್ ಬ್ಯಾಂಕಿಂಗ್' ವ್ಯವಸ್ಥೆ ಆರಂಭಿಸಿತ್ತು. ಕೇವಲ ಒಂದು ಫೋನ್ ಕರೆ ಆಧರಿಸಿ ಬ್ಯಾಂಕುಗಳು ಕೋಟಿಗಟ್ಟಲೆ ಸಾಲ ನೀಡುತ್ತಿದ್ದವು' ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com