ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾ ನಗರದ ಮಜೆರ್ಹಾಟ್ ಸೇತುವೆ ಕುಸಿದ ಸ್ಥಳದಲ್ಲಿ ಅವಶೇಷಗಳಡಿಯಲ್ಲಿ ಜನರು ಸಿಲುಕಿ ಹಾಕಿಕೊಂಡಿರುವ ಸಾಧ್ಯತೆಯಿರುವುದರಿಂದ ಮಧ್ಯರಾತ್ರಿಯಿಂದ ಶೋಧ ಮತ್ತು ತೆರವು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿರುವ 50 ವರ್ಷಗಳ ಹಳೆಯ ಸೇತುವೆಯ ಒಂದು ಭಾಗ ನಿನ್ನೆ ಸಂಜೆ ಕುಸಿದು ಬಿದ್ದು ಒಬ್ಬ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಹಲವು ವಾಹನಗಳು ಕೂಡ ಜಖಂಗೊಂಡಿವೆ.
ಸೇತುವೆ ಕುಸಿದಿದ್ದ ಸಂದರ್ಭದಲ್ಲಿ ಅಲ್ಲಿ ಮಳೆ ಸುರಿಯುತ್ತಿತ್ತು. ಇದರ ಮಧ್ಯೆಯೇ ರಕ್ಷಣಾ ತಂಡಗಳು ಕಾಂಕ್ರೀಟ್ ಸ್ಲಾಬ್ ಗಳನ್ನು ಕೊರೆಯಲು ನೋಡಿದ್ದು ಅತ್ಯಾಧುನಿಕ ಕ್ಯಾಮರಾಗಳನ್ನು ತಂದು ಮತ್ತು ಶ್ವಾನವನ್ನು ಕರೆತಂದು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚುವರಿ ಲೈಟಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಸಿದುಹೋಗಿರುವ ಸೇತುವೆಯಡಿಯಲ್ಲಿ ಕೆಲವರು ಸಿಲುಕಿಹಾಕಿಕೊಂಡಿರುವ ಸಾಧ್ಯತೆಯಿದೆ. ಅವರನ್ನು ಹುಡುಕಿ ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ. ಸೇತುವೆಯ ಕಾಂಕ್ರೀಟ್ ಸ್ಲಾಬ್ ಗಳನ್ನು ತುಂಡು ಮಾಡಲು ಕಟ್ಟರ್ ಮತ್ತು ಡ್ರಿಲ್ಲಿಂಗ್ ಮೆಶಿನ್ ಗಳನ್ನು ಬಳಸಲಾಗಿದೆ. ಇದುವರೆಗೆ ಯಾರನ್ನೂ ಪತ್ತೆಹಚ್ಚಲಾಗಿಲ್ಲ. ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೇತುವೆ ಕುಸಿದ ಹತ್ತಿರ ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿದ್ದು ನಿರ್ಮಾಣ ಸಾಮಗ್ರಿಗಳು ಅಲ್ಲೆಲ್ಲಾ ಹರಡಿವೆ. ಡಾರ್ಜಿಲಿಂಗ್ ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
Advertisement