ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ 'ಕೈ'ಜೋಡಿಸಿದ ಟಿಡಿಪಿ, 36 ವರ್ಷದ ದ್ವೇಷಕ್ಕೆ ಅಂತ್ಯ

ರಾಜಕೀಯ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಮತ್ತು ಟಿಡಿಪಿ ಮಂಗಳವಾರ ಜಂಟಿ ಸಭೆ ನಡೆಸುವ ಮೂಲಕ ತೆಲುಗು...
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಕಾಂಗ್ರೆಸ್ ಮುಖಂಡ ಉತ್ತಮ ಕುಮಾರ್ ರೆಡ್ಡಿ
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಕಾಂಗ್ರೆಸ್ ಮುಖಂಡ ಉತ್ತಮ ಕುಮಾರ್ ರೆಡ್ಡಿ
ಹೈದರಾಬಾದ್: ರಾಜಕೀಯ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಮತ್ತು ಟಿಡಿಪಿ ಮಂಗಳವಾರ ಜಂಟಿ ಸಭೆ ನಡೆಸುವ ಮೂಲಕ ತೆಲುಗು ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿವೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಅನ್ನು ಎದುರಿಸಲು ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಇಂದು ಜಂಟಿ ಸಭೆ ನಡೆಸಿ ಸಾಮಾನ್ಯ ಪ್ರಣಾಳಿಕೆ ಸಿದ್ಧಪಡಿಸುವ ನಿರ್ಧಾರ ಬರಲಾಗಿದೆ.
ಸಭೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್ ಉತ್ತಮ ಕುಮಾರ್ ರೆಡ್ಡಿ, ತೆಲಂಗಾಣ ಟಿಡಿಪಿ ಅಧ್ಯಕ್ಷ ಎಲ್ ರಮಣ, ಸಿಪಿಐ ರಾಜ್ಯ ಕಾರ್ಯದರ್ಶಿ ಚಡ ವೆಂಕಟ್ ರೆಡ್ಡಿ ಹಾಗೂ ಇತರರು ಭಾಗವಹಿಸಿದ್ದರು.
ಕೆಸಿಆರ್ ವಿರುದ್ಧ ಮಹಾಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ ನಂತರ ನಡೆದ ಮೊದಲ ಸಭೆ ಇದಾಗಿದ್ದು, ಟಿಡಿಪಿ, ಕಾಂಗ್ರೆಸ್ ನೊಂದಿಗಿನ 36 ವರ್ಷಗಳ ದ್ವೇಷ ಮರೆತು ಮೈತ್ರಿಗೆ ಕೈಜೋಡಿಸಿದೆ.
ತೆಲಂಗಾಣದಲ್ಲಿ ಕೆಸಿಆರ್ ಅವರ ಸರ್ವಾಧಿಕಾರಿ ಮತ್ತು ದುರಾಡಳಿತಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಟಿಡಿಪಿ ಜತೆ ಕೈಜೋಡಿಸಿದೆ. ಇಂದು ನಾವು ಟಿಡಿಪಿ ಮತ್ತು ಸಿಪಿಐ ಜತೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದೇವೆ. ಟಿಡಿಪಿ ಮತ್ತು ಸಿಪಿಐ ಸಾಮಾನ್ಯ ಪ್ರಣಾಳಿಕೆಗೆ ಒಪ್ಪಿಕೊಂಡಿವೆ ಎಂದು ಸಭೆಯ ನಂತರ ಉತ್ತಮ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಮ್ಮ ಪಕ್ಷ ಯತ್ನಿಸುತ್ತಿದೆ ಮತ್ತು ಈ ಸಂಬಂಧ ಸಿಪಿಐ, ಕೊಂಡರಾಮ್(ಟಿಜೆಎಸ್) ಹಾಗೂ ಟಿಡಿಪಿ ಜತೆ ನಿರಂತರ ಸಂಪರ್ಕದಲ್ಲಿದೆ ಎಂದು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್ ಸಿ ಖುಂಟಿಯಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com