ತಿರುವನಂತಪುರಂ: ಜಲಂಧರ್ ನಲ್ಲಿರುವ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಾಕಲ್ ಅವರು ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಈ ಸಂಬಂಧ ತಾವು ತನಿಖೆಗೆ ಸಿದ್ಧವಿರುವುದಾಗಿ ಮಂಗಳವಾರ ಹೇಳಿದ್ದಾರೆ.
ನನ್ನ ವಿರುದ್ಧದ ಆರೋಪಗಳೆಲ್ಲವೂ ಆಧಾರ ರಹಿತ ಮತ್ತು ಕಟ್ಟುಕತೆ ಎಂದಿರುವ ಬಿಷಪ್, ಒಂದು ವೇಳೆ ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನಗೆ ಶಿಕ್ಷೆಯಾಗಲಿ. ಪೊಲೀಸರು ಸಮನ್ಸ್ ಜಾರಿ ಮಾಡಿದರೆ ವಿಚಾರಣೆಗೆ ಹಾಜರಾಗುತ್ತೇನೆ. ನಾನು ಕಾನೂನು ಪಾಲಿಸುವ ನಾಗರಿಕ ಎಂದು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಎಲ್ಲರಂತೆ ನನಗೂ ಕಾನೂನು ಹೋರಾಟ ನಡೆಸುವ ಹಕ್ಕು ಇದೆ ಎಂದು ನನ್ ಮೇಲೆ ಅತ್ಯಾಚಾರ ಮತ್ತು ಅನೈಸರ್ಗಿಕ ಸೆಕ್ಸ್ ನಡೆಸಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೊ ಮುಲಾಕಲ್ ಅವರು ಹೇಳಿದ್ದಾರೆ.
ನನ್ನ ವಿರುದ್ಧದ ಆರೋಪ ಗಂಭೀರವಾಗಿದ್ದು, ಈ ಬಗ್ಗೆ ದೂರದಾರ ನನ್ ಸಹೋದರಿ, ನಾನು ಮತ್ತು ದೇವರಿಗೆ ಮಾತ್ರ ಸತ್ಯ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಬಿಷಪ್ ಮುಲ್ಲಕಲ್ ಅವರು 2014 ರಿಂದ 2016ರ ವರೆಗೆ ಅನೇಕ ಬಾರಿ ನನ್ನ ಅತ್ಯಾಚಾರ ನಡೆಸಿದ್ದಲ್ಲದೆ ಅನೈಸರ್ಗಿಕ ಸೆಕ್ಸ್ ನಡೆಸಿದ್ದಾರೆ ಎಂದು ನನ್ (ಕ್ರೈಸ್ತ ಸನ್ಯಾಸಿನಿ) ಒಬ್ಬರು ಕೇರಳ ಪೊಲೀಸರಿಗೆ ದೂರು ನೀಡಿದ್ದಾರೆ.