ಐಜಾಲ್: ಮಿಜೋರಾಂ ಗೃಹ ಸಚಿವ ಲಾಲ್ ಝಿರ್ಲಿಯಾನಾ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆ ಆಘಾತ ನೀಡಿದ್ದಾರೆ.
ಲಾಲ್ ಝಿರ್ಲಿಯಾನಾ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನವಾಲಾ ಅವರ ಗೃಹ ಕಚೇರಿಗೆ ತೆರಳಿ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳು ಕಚೇರಿಯಲ್ಲಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿಎಂ ಲಾಲ್ ಥನವಾಲಾ ಅವರು ಪಟ್ಟಣದಿಂದ ಹೊರಗಿರುವುದರಿಂದ ಗೃಹ ಸಚಿವರು ರಾಜಿನಾಮೆ ಪತ್ರವನ್ನು ಸಿಎಂ ಮುಖ್ಯ ಕಾರ್ಯದರ್ಶಿ ಲಾಲ್ ರಾಮ್ ಥಂಗಾ ಅವರಿಗೆ ನೀಡಿದ್ದಾರೆ.
ಮಿಜೋರಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿರುವ ಲಾಲ್ ಝಿರ್ಲಿಯಾನಾ ಅವರು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೆಪ್ಟೆಂಬರ್ 11 ರಂದು ಎಂಪಿಸಿಸಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು.