ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಕೋರಿಕೆ: ಕೇಂದ್ರಕ್ಕೆ ವರ್ಗಾ ಇಲ್ಲ- ರಾಜ್ಯಪಾಲರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು ಕೇಂದ್ರಸರ್ಕಾರಕ್ಕೆ ವರ್ಗಾವಣೆ ಮಾಡುವುದಿಲ್ಲ ಎಂದು ರಾಜಭವನ ಮೂಲಗಳು ಸ್ಪಷ್ಟಪಡಿಸಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು  ರಾಜ್ಯಪಾಲರು ಕೇಂದ್ರಸರ್ಕಾರಕ್ಕೆ ವರ್ಗಾವಣೆ ಮಾಡಲಿದ್ದಾರೆ ಎಂಬ ಮಾಧ್ಯಮಗಳ ವರದಿಗಳನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಿರಾಕರಿಸಿದ್ದಾರೆ.

ಈ ಸಂಬಂಧ ಸಂವಿಧಾನದ ಅನುಸಾರ  ನ್ಯಾಯೋಚಿತ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

 ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಮಂದಿ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು ರಾಜ್ಯಪಾಲರು  ಕೇಂದ್ರ ಗೃಹ ಸಚಿವಾಲಯಕ್ಕೆ ವರ್ಗಾಯಿಸಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.ಕೆಲ ಸುದ್ದಿ ವಾಹಿನಿಗಳು ಕೂಡಾ ಈ ಕಲ್ಪನೆ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದವು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಯಾವುದೇ ವರದಿ ಸಲ್ಲಿಸುವುದಿಲ್ಲ ಎಂದು ರಾಜಭವನ ಸ್ಪಷ್ಟಪಡಿಸಿದ್ದು, ಇದೊಂದು ಸಂಕೀರ್ಣ ಹಾಗೂ ಕಾನೂನೂತ್ಮಕ ಪರಿಶೀಲನೆ ಒಳಪಟ್ಟಿರುವುದರಿಂದ ಸಂವಿಧಾನದ ಅನುಸಾರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ರಾಜಭವನದ ಸಾರ್ವಜನಿಕ ಸಂಪರ್ಕದ ಜಂಟಿ ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹಂತಕರಾದ ನಳಿನಿ ಮತ್ತು ಆಕೆಯ ಪತಿ ಶ್ರಿಹರನ್ ಸೇರಿದಂತೆ ಏಳು ಮಂದಿಯನ್ನು ಬಿಡುಗಡೆಗೊಳಿಸುವಂತೆ   ಸೆಪ್ಟೆಂಬರ್ 9 ರಂದು ತಮಿಳುನಾಡು ಸಂಪುಟ ರಾಜ್ಯಪಾಲರಿಗೆ ಶಿಫಾರಸ್ಸು ಕಳುಹಿಸಿತ್ತು . ಇವರೆಲ್ಲರೂ 1991ರಿಂದಲೂ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com