ಅಪರೂಪಕ್ಕೆ ಕಾಂಗ್ರೆಸ್ ಬಣ್ಣಿಸಿದ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್

ಅಪರೂಪ ಎಂಬಂತೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಪರೂಪ ಎಂಬಂತೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ಉಪನ್ಯಾಸ ಸರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಭಾಗ್ವತ್ ಅವರು, 'ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.  'ಕಾಂಗ್ರೆಸ್‌ನ ರೂಪದಲ್ಲಿ ದೇಶದಲ್ಲಿ ಬಲುದೊಡ್ಡ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಿತ್ತು. ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾತ್ಮರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದು, ಇದು ನಮಗೆ ಸ್ಫೂರ್ತಿದಾಯಕ. ಇಂತಹ ಮಹಾತ್ಮರು ಜನಸಾಮಾನ್ಯರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವಂತೆ ಮಾಡಲು ಪ್ರೇರಣೆಯಾಗಿದ್ದರು. ಇದರಲ್ಲಿ ಕಾಂಗ್ರೆಸ್ ನ ದೊಡ್ಡ ಕೊಡುಗೆಯಿದೆ. ಕಾಂಗ್ರೆಸ್‌ ದೇಶಕ್ಕೆ ಮಹೋನ್ನತ ನಾಯಕರನ್ನು ನೀಡಿದೆ' ಎಂದು ಭಾಗವತ್ ಹೇಳಿದ್ದಾರೆ.
ಸಂಘಕ್ಕೆ ಬಂದು ನೋಡಿ, ಅಲ್ಲೇನಿದೆ ಎಂದು ತಿಳಿಯುತ್ತದೆ!
ಇದೇ ವೇಳೆ ಆರ್ ಎಸ್ ಎಸ್ ಟೀಕಿಸುವವರ ವಿರುದ್ಧ ಕಿಡಿಕಾರಿದ ಭಾಗ್ವತ್, 'ಸಂಘಕ್ಕೆ ಬಂದು ಅಲ್ಲೇನಿದೆ ಎಂಬುದನ್ನು ಒಳಗಿನಿಂದ ನೋಡಿ. ಗೊತ್ತಿಲ್ಲದವರ ಮಾತು ಕೇಳಿ ಸಂಘದ ಬಗ್ಗೆ ತೀರ್ಮಾನಕ್ಕೆ ಬರಬೇಡಿ. ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಆರ್ ಎಸ್‌ಎಸ್ ಗೆ ಮುಖ್ಯವಲ್ಲ. ಯಾವ ನೀತಿ ಮತ್ತು ಕಾರ್ಯಕ್ರಮಗಳನ್ನು ದೇಶವು ಒಪ್ಪಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ಜನರ ಹಕ್ಕು ಎಂದು ಭಾಗವತ್‌ ಹೇಳಿದರು. 
ಇದೇ ವೇಳೆ ಸಂಘವು ಎಲ್ಲರಿಗೂ ಸೇರಿದ್ದು. ಸಂಘವನ್ನು ವಿರೋಧಿಸುವವರಿಗೂ ಸಂಘವು ಸೇರಿದ್ದಾಗಿದೆ ಎಂದು ಭಾಗವತ್‌ ಹೇಳಿದರು. ಕೆಲ ಸಮಯದ ಹಿಂದೆ ಬಿಜೆಪಿ ಹೊರಡಿಸಿದ್ದ ‘ಕಾಂಗ್ರೆಸ್‌ಮುಕ್ತ ಭಾರತ’ ಎಂಬ ಘೋಷಣೆಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನವನ್ನು ಈ ಸಂದರ್ಭದಲ್ಲಿ ಭಾಗವತ್‌ ಮಾಡಿದ್ದು ವಿಶೇಷವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com