ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಅಪ್ಪಿಕೊಂಡಿದ್ದು ಯೋಧರ ಮೇಲೆ ಪರಿಣಾಮ ಬೀರಿದೆ: ರಕ್ಷಣಾ ಸಚಿವೆ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅಪ್ಪಿಕೊಂಡಿದ್ದು, ಭಾರತೀಯ ಯೋಧರ ಮೇಲೆ ಪರಿಣಾಮ ಬೀರಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್...
ನವದೆಹಲಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅಪ್ಪಿಕೊಂಡಿದ್ದು, ಭಾರತೀಯ ಯೋಧರ ಮೇಲೆ ಪರಿಣಾಮ ಬೀರಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಿಧು ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತರ ಸ್ಥಾನದಲ್ಲಿರುವವರು ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದು ಭಾರತೀಯ ಸೇನಾ ಯೋಧರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಜನರ ನಂಬಿಕೆ ಕುಸಿಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಳ್ಳುವುದನ್ನು ಸಿಧು ನಿಯಂತ್ರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಮ್ರಾನ್ ಖಾನ್ ಅವರು ಪಾಕಿಸ್ತಾನ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ನೀಡಿದ್ದರು. ಸಾಕಷ್ಟು ವಿರೋಧಗಳ ನಡುವೆಯೂ ಆಹ್ವಾನವನ್ನು ಸ್ವೀಕರಿಸಿದ್ದ ಸಿಧು ಅವರು, ಪಾಕಿಸ್ತಾನಕ್ಕೆ ತೆರಳಿದ್ದರು.
ಸಮಾರಂಭಕ್ಕೆ ತೆರಳಿದ್ದ ಸಿಧು ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದರು. ಇದು ಸಾಕಷ್ಟು ಟೀಕೆ ಹಾಗೂ ವಿರೋಧಗಳಿಗೆ ಕಾರಣವಾಗಿದೆ.
ತೀವ್ರ ವಿರೋಧ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದಕ್ಕೆ ಸಮರ್ಥನೆ ನೀಡಿದ್ದ ಸಿಧು, ಖ್ವಾಮರ್ ಜಾವೆದ್ ಅವರು ಪಂಜಾಬ್ ರಾಜ್ಯದ ಸಿಖ್ ಯಾತ್ರಾರ್ಥಿಗಳಿಗಾಗಿ ಕರ್ತಾರ್ಪುರ ಗಡಿ ಭಾಗವನ್ನು ತೆರೆಯುವುದಾಗಿ ಹೇಳಿದ್ದರು. ಹೀಗಾಗಿ ನಾನು ಅವರನ್ನು ಅಪ್ಪಿಕೊಂಡಿದ್ದೆ ಎಂದು ಹೇಳಿದ್ದರು.