ಸಂಗ್ರಹ ಚಿತ್ರ
ದೇಶ
ಕಾಶ್ಮೀರ: ಉಗ್ರರಿಂದ ಪೊಲೀಸರ ಅಹಪರಣ, ಹತ್ಯೆ ಬೆನ್ನಲ್ಲೇ 7 ಪೊಲೀಸರಿಂದ ರಾಜಿನಾಮೆ ನಿರ್ಧಾರ!
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಉಗ್ರರ ಬೆದರಿಕೆಗೆ ಆತಂಕ ವ್ಯಕ್ತಪಡಿಸಿರುವ 7 ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಉಗ್ರರ ಬೆದರಿಕೆಗೆ ಆತಂಕ ವ್ಯಕ್ತಪಡಿಸಿರುವ 7 ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಇಂದು ಮುಂಜಾನೆ ಮೂವರು ಎಸ್ ಪಿಒ ಅಧಿಕಾರಿಗಳು ಸೇರಿದಂತೆ ಒಟ್ಟು 4 ಪೊಲೀಸ್ ಸಿಬ್ಬಂದಿಗಳನ್ನು ಅಹಪರಣ ಮಾಡಿದ್ದ ಉಗ್ರರು ಈ ಪೈಕಿ ಮೂವರನ್ನು ಕೊಂದು ಹಾಕಿದ್ದರು. ಓರ್ವ ಅಧಿಕಾರಿ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದ. ಮೂವರು ಅಧಿಕಾರಿಗಳನ್ನು ಕೊಂದ ಬಳಿಕ ವಿಡಿಯೋ ಸಂದೇಶ ರವಾನಿಸಿದ್ದ ಉಗ್ರರು ಇನ್ನು ಐದು ದಿನಗಳಲ್ಲಿ ಕೆಲಸಕ್ಕೆ ರಾಜಿನಾಮೆ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದರ ಬೆನ್ನಲ್ಲೇ ಉಗ್ರ ಹಾವಳಿಗೆ ಬೆದರಿರುವ ಪೊಲೀಸ್ ಅಧಿಕಾರಿಗಳು ರಾಜಿನಾಮೆಗೆ ಮುಂದಾಗಿದ್ದಾರೆ. ಶೋಪಿಯಾನ್ ನಲ್ಲಿ ಇಂದು ಐದು ಮಂದಿ ಪೊಲೀಸರು ರಾಜಿನಾಮೆ ಘೋಷಣೆ ಮಾಡಿದ್ದು, ಈ ಪೈಕಿ ಮೂವರು ಪೊಲೀಸ್ ಪೇದೆಗಳು ಮತ್ತು ಇಬ್ಬರು ಎಸ್ ಪಿಒ ಅಧಿಕಾರಿಗಳು ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಮೂವರು ಅಧಿಕಾರಿಗಳು ವಾಟ್ಸಪ್ ನಲ್ಲಿ ರಾಜಿನಾಮೆ ಘೋಷಣೆ ಮಾಡಿದ್ದು, ಅಲ್ಲದೆ ತಮ್ಮ ಆತಂಕ ಮತ್ತು ಕಳವಳ ವ್ಯಕ್ತಪಡಿಸಿದ್ದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆ ವಿರುದ್ಧ ಕಿಡಿಕಾರಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ, ಸೇನೆ ಮತ್ತು ಪೊಲೀಸ್ ಕೆಲಸವೂ ಸೇರಿದಂತೆ ಕಾಶ್ಮೀರಿಗಳು ಸರ್ಕಾರಿ ಕೆಲಸ ತೊರೆಯದಿದ್ದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಇಂದು ನಾಲ್ಕು ಮಂದಿಯನ್ನು ಉಗ್ರರು ಅಪಹರಣ ಮಾಡಿ ಮೂವರನ್ನು ಕೊಂದು ಹಾಕಿದ್ದರು. ಈ ಬೆಳವಣಿಗೆಯಿಂದ ಕಾಶ್ಮೀರದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದ್ದು, ಕಾಶ್ಮೀರಿ ಪೊಲೀಸರು ಇದೀಗ ತೀವ್ರ ಆತಂಕದಲ್ಲಿ ಕೆಲಸ ನಿರ್ವಹಣೆ ಮಾಡುವಂತಾಗಿದೆ.
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 36 ಸಾವಿರ ಎಸ್ ಪಿಒ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 22 ಜಿಲ್ಲೆಗಳಲ್ಲಿ ಕರ್ತವ್ಯ ನಿರತರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ