ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧ; ಹೋರಾಟ ನಡೆದುಬಂದ ಹಾದಿ

ದೇಶದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಕೇರಳ ರಾಜ್ಯದ ಶಬರಿಮಲೆ ದೇವಸ್ಥಾನ ಕೂಡ ಒಂದು...
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ
Updated on: 

ದೇಶದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಕೇರಳ ರಾಜ್ಯದ ಶಬರಿಮಲೆ ದೇವಸ್ಥಾನ ಕೂಡ ಒಂದು. ಕೇರಳದ ಪಥನಂತಿಟ್ಟ ಜಿಲ್ಲೆಯ ಸಂಪದ್ಭರಿತ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರದಲ್ಲಿ ಪೆರಿಯಾರ್ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯವಿದೆ.

ಈ ದೇವಾಲಯಕ್ಕೆ ಎಲ್ಲಾ ಜಾತಿ, ಧರ್ಮದ ಜನರಿಗೆ ಪ್ರವೇಶಕ್ಕೆ ಅನುಮತಿ ಇದೆ ಎಂದು ದೇವಾಲಯದ ವೆಬ್ ಸೈಟ್ ಹೇಳುತ್ತದೆ. ಆದರೆ ವಿವಾದವೆದ್ದದ್ದು ಮಹಿಳೆಯರ ಪ್ರವೇಶ ನಿಷೇಧಕ್ಕೆ. ಇಷ್ಟು ವರ್ಷಗಳ ಕಾಲ ಈ ಐತಿಹಾಸಿಕ ದೇವಾಲಯಕ್ಕೆ ಋತುಮತಿಯಾದ ನಂತರ ಹೆಣ್ಣು ಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಇಂದು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ಐತಿಹಾಸಿಕ ತೀರ್ಪು ನೀಡಿದೆ.
ಮಹಿಳೆಯರ ನಿಷೇಧದ ಸುತ್ತಲಿನ ವಾದ, ವಿವಾದಗಳು ಮತ್ತು ವಾಸ್ತವ ಸಂಗತಿಗಳು ಹೀಗಿವೆ:

ಸೌದಿ ಅರೇಬಿಯಾದ ಮೆಕ್ಕಾ ಧಾರ್ಮಿಕ ಕೇಂದ್ರದ ನಂತರ ನಿರ್ದಿಷ್ಟ ಕಾಲದಲ್ಲಿ ತೀರ್ಥಯಾತ್ರೆ ಮಾಡುವ ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ಧಾರ್ಮಿಕ ಕೇಂದ್ರವೆಂದು ಜನಪ್ರಿಯವಾಗಿದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 4 ಕೋಟಿ ಯಾತ್ರಿಗರು ಮಕರ ಸಂಕ್ರಾಂತಿ ಸಮಯದಲ್ಲಿ ಶಬರಿಮಲೆಗೆ ಭೇಟಿ ನೀಡುತ್ತಿದ್ದು ಸುಮಾರು 300 ಕೋಟಿಯಷ್ಟು ರೂಪಾಯಿ ಆದಾಯ ದೇವಾಲಯಕ್ಕೆ ಹರಿದುಬರುತ್ತದೆ.

ಮಕರ ಸಂಕ್ರಾಂತಿ ಸಮಯದಲ್ಲಿ ಶಬರಿಮಲೆಗೆ ಹೋಗುವವರು ಸಾಮಾನ್ಯವಾಗಿ ಮಾಲೆ ಧರಿಸಿ ನಂತರ 41 ದಿನಗಳ ವ್ರತ ಆಚರಿಸಿ ನಂತರ ಯಾತ್ರೆ ಕೈಗೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋಗಬೇಕೆಂದರೆ ಪಂಪ ಬೆಟ್ಟದ ತುದಿಯವರೆಗೆ ಮಾತ್ರ ವಾಹನದಲ್ಲಿ ಹೋಗಬಹುದು, ನಂತರ ಬೆಟ್ಟ ಹತ್ತಿಕೊಂಡೇ ಸಾಗಬೇಕು.

ಹಿಂದೂ ಪುರಾಣದ ಪ್ರಕಾರ, ಅಯ್ಯಪ್ಪ ದೇವರು ಮಹಿಷಿ ರಾಕ್ಷಸನನ್ನು ಕೊಂದ ನಂತರ ಶಬರಿಮಲೆಗೆ ಹೋಗಿ ಧ್ಯಾನ ಮಾಡಿದರು ಎಂದು ಹೇಳುತ್ತದೆ. ಇನ್ನೊಂದು ಪುರಾಣದ ಕಥೆಯಲ್ಲಿ, ಪರಶುರಾಮ ಮಹರ್ಷಿ ತನ್ನ ಕೊಡಲಿಯನ್ನು ಎಸೆದು ಶಬರಿಮಲೆಯಲ್ಲಿ ಅಯ್ಯಪ್ಪನ ಮೂರ್ತಿ ಉದ್ಭವಿಸಿತು ಎಂದು ಹೇಳುತ್ತದೆ.

ವಿವಾದ ಉಂಟಾಗಿದ್ದು 10ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧ ಮಾಡಿರುವುದರಿಂದ. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಅಶುದ್ಧವಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಆದೇಶ ತಂದಿತ್ತು. ಅದನ್ನು ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿತ್ತು.

ಮಹಿಳೆಯರಿಗೆ ನಿಷೇಧ ಹೇರುವ ಮೂಲಕ ಅವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಅವರನ್ನು ತಾರತಮ್ಯ ಮಾಡಲಾಗುತ್ತಿದೆ ಎಂದು ಸಮಾಜದ ಒಂದು ವರ್ಗದ ಮಹಿಳೆಯರು ಸೇರಿದಂತೆ ಕ್ರಾಂತಿಕಾರಿಗಳು, ಪ್ರಗತಿಪರರು ಟೀಕಿಸಿದ್ದರು.

ರಾಜ್ಯದ ಇಂದಿನ ಸಚಿವೆ ಹಿರಿಯ ನಟಿ ಜಯಮಾಲಾ 2006ರಲ್ಲಿ ದೇವಾಲಯದ ಆಡಳಿತ ಮಂಡಳಿಯ ಸಂಪ್ರದಾಯವನ್ನು ಧಿಕ್ಕರಿಸಿ ದೇವಾಲಯದೊಳಗೆ ಪ್ರವೇಶಿಸಿ ಗರ್ಭಗುಡಿ ಪ್ರವೇಶಿಸಿ ಮೂರ್ತಿಯನ್ನು ಸಹ ಮುಟ್ಟಿದ್ದರು. ಆಗಲೇ ವಿವಾದ ತಾರಕಕ್ಕೇರಿದ್ದು. ಕೇರಳ ಸರ್ಕಾರ ಈ ವಿವಾದವನ್ನು ಅಪರಾಧ ವಿಭಾಗಕ್ಕೆ ತನಿಖೆಗೆ ಉಲ್ಲೇಖಿಸಿತ್ತು ಆದರೆ ನಂತರ ಆ ಕೇಸು ಬಿದ್ದುಹೋಯಿತು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತ ಕಾನೂನು ಹೋರಾಟಕ್ಕೆ ದೀರ್ಘ ಇತಿಹಾಸವೇ ಇದೆ. ಈ ಕುರಿತು ಕೇರಳ ಸರ್ಕಾರದ ನಿಲುವು ಕಾಲಕಾಲಕ್ಕೆ ಬದಲಾಗುತ್ತಲೇ ಇತ್ತು. 1991ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಸಂಪ್ರದಾಯಬದ್ಧವಾಗಿ ನಿಷೇಧ ಹೇರಲಾಗಿದ್ದು ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ತಾರತಮ್ಯ ಎನಿಸುವುದಿಲ್ಲ ಎಂದು ಹೇಳಿತ್ತು.

2008ರಲ್ಲಿ ಕೇರಳದ ಎಲ್ ಡಿಎಫ್ ಸರ್ಕಾರ ಮಹಿಳೆಯರ ಪ್ರವೇಶ ಪ್ರಶ್ನಿಸಿ ಮಹಿಳಾ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೆಂಬಲಿಸಿ ಅಫಿಡವಿಟ್ಟು ಸಲ್ಲಿಸಿತ್ತು.
ಭಾರತೀಯ ಯುವ ವಕೀಲರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2016ರ ಜನವರಿಯಲ್ಲಿ ಕೈಗೆತ್ತಿಕೊಂಡಿತ್ತು. ಕೆಲವು ಮಹಿಳಾ ವಕೀಲರೂ ಕೂಡ ನಿಷೇಧದ ಮೌಲ್ಯ ಮತ್ತು ಕೇರಳ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಹಿಂದೂ ಸಂಪ್ರದಾಯಗಳಡಿಯಲ್ಲಿ ನಿಷೇಧವಿಲ್ಲ, ಇದೊಂದು ಹಿಂದೂ ವಿರೋಧಿ ಕ್ರಮವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಲಾಗಿತ್ತು.

ನವೆಂಬರ್ 2016: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೋರಿ ಕೇರಳದ ಎಲ್ ಡಿಎಫ್ ಸರ್ಕಾರ ಅಫಿಡವಿಟ್ಟು ಸಲ್ಲಿಕೆ.

ಅಕ್ಟೋಬರ್ 2017: ಅರ್ಜಿ ವಿಚಾರಣೆ ನಡೆಸಿ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಸಂವಿಧಾನ ಪರಿಚ್ಛೇದ 14,15 ಮತ್ತು 17ನ್ನು ಉಲ್ಲಂಘಿಸುತ್ತದೆಯೇ ಎಂದು ಪರೀಕ್ಷಿಸಲು ಸೂಚನೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ರಚನೆ, ಮಹಿಳೆಯರ ಮೂಲಭೂತ ಹಕ್ಕು, ಸಾಂವಿಧಾನಿಕ ಹಕ್ಕು ಉಲ್ಲಂಘವಾಗುತ್ತದೆಯೇ ಎಂದು ಪರಿಶೀಲನೆ,

ಜುಲೈ 2018: ನಿರ್ದಿಷ್ಟ ವಯಸ್ಸಿನ ಮಹಿಳೆಯರನ್ನು ದೇವಸ್ಥಾನ ಪ್ರವೇಶಿಸಲು ಏಕೆ ನಿರಾಕರಿಸುತ್ತೀರಿ ಎಂದು ತಿರುವಂಕೂರು ದೇವಸ್ಥಾನ ಮಂಡಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಪ್ರಶ್ನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com