ಬಿಜೆಪಿ ರ್ಯಾಲಿ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ: ಜಮ್ಮು-ಕಾಶ್ಮೀರ ಪೊಲೀಸರಿಂದ ಎಫ್ಐಆರ್ ದಾಖಲು
ಬಿಜೆಪಿ ರ್ಯಾಲಿ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ...
ಜಮ್ಮು: ಬಿಜೆಪಿ ರ್ಯಾಲಿ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಜಮ್ಮುವಿನ ಕತುವಾ ಜಿಲ್ಲೆಯ ಬಿಜೆಪಿ ಹಿರಿಯ ನಾಯಕ ರಾಜೀವ್ ಜಸ್ರೋತಿಯಾ ನೇತೃತ್ವದಲ್ಲಿ ರ್ಯಾಲಿ ನಡೆದಿದ್ದು, ರ್ಯಾಲಿ ವೇಳೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಿ ಅಪಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು.
ಪ್ರಕರಣ ಸಂಬಂಧ ಸ್ಥಳೀಯ ನಿವಾಸಿ ವಿನೋದ್ ನಿಝ್ವಾನ್ ಎಂಬವವರು ದೂರು ನೀಡಿದ್ದರು. ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಹುಲ್ ದೇವ್ ಶರ್ಮಾ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಹೇಳಿದ್ದರು. ಅಲ್ಲದೆ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ವಿಡಿಯೋವನ್ನೂ ಪೊಲೀಸರಿಗೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕತುವಾ ಪೊಲೀಸ್ ಠಾಣಾಧಿಕಾರಿಗಳು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸೆ.19 ಗುರುವಾರ ಈ ರ್ಯಾಲಿ ನಡೆದಿದ್ದು, ಕತುವಾ ಕ್ಷೇತ್ರದ ಬಿಜೆಪಿ ಶಾಸಕ ಜಸ್ರೋತಾ ಅವರೊಂದಿಗೆ ಶರ್ಮಾ ಕೂಡ ಇರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸುಮಾರು 2 ಕಿ.ಮೀ ವರೆಗೂ ನಾಯಕರು ರಾಷ್ಟ್ರಧ್ವಜನ್ನು ತಲೆಕೆಳಗಾಗಿ ಪ್ರದರ್ಶಿಸಿರುವುದ್ದಾರೆಂದು ದೂರುದಾರರು ಹೇಳಿಕೊಂಡಿದ್ದಾರೆ.