ಕೊಚ್ಚಿ: ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಕೆಎಂ ಮಣಿ( 86) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಕೇರಳದ ಮಾಜಿ ವಿತ್ತ ಸಚಿವ ಕೆ.ಎಂ.ಮಣಿ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಕಳೆದ ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೇರಳ ವಿಧಾನಸಭೆಯಲ್ಲಿ ಅತಿ ಹೆಚ್ಚು ಕಾಲ ಶಾಸಕರಾಗಿ ಹಾಗೂ ವಿತ್ತ ಸಚಿವರಾಗಿ 13 ಬಜೆಟ್ ಮಂಡಿಸಿದ ದಾಖಲೆ ಮಣಿ ಅವರ ಹೆಸರಿನಲ್ಲಿದೆ. 11 ವರ್ಷಗಳ ಕಾಲ ವಿತ್ತ ಸಚಿವಾಲಯ ಮತ್ತು 20 ವರ್ಷ ಕಾನೂನು ಸಚಿವಾಲಯದ ಜವಾಬ್ದಾರಿ ನಿರ್ವಹಿಸಿದ ಸಚಿವ ಎಂಬ ಹೆಗ್ಗಳಿಕೆಯೂ ಇವರಿಗಿದೆ.